ಮುಂಬೈ: ಸರ್ಕಾರ ನಿಗದಿ ಮಾಡುವ ಗುರಿಗಳನ್ನು ತಲುಪುವ ಭರದಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ಬಲಿಕೊಡುವುದಿಲ್ಲ ಎಂಬ ಭರವಸೆ ನೀಡುವಂತೆ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಹೂಡಿಕೆ ಮಾಡುವ ಆಲೋಚನೆಯಲ್ಲಿರುವ ಕೆಲವರು ಆಗ್ರಹಿಸಿದ್ದಾರೆ.
ಷೇರು ಮಾರಾಟದ ಮೂಲಕ ಅಂದಾಜು ₹ 60 ಸಾವಿರ ಕೋಟಿ ಸಂಗ್ರಹಿಸಲಿದೆ. ಷೇರು ಮಾರಾಟದ ನಂತರದಲ್ಲಿ ಕೇಂದ್ರ ಸರ್ಕಾರವು ಎಲ್‌ಐಸಿಯ ಬಹುಪಾಲು ಷೇರುಗಳನ್ನು (ಶೇ 95ರಷ್ಟು) ಹೊಂದಿರಲಿದೆ.
ದೇಶದಲ್ಲಿ ಇದುವರೆಗೆ ನಡೆದಿರುವ ಎಲ್ಲ ಐಪಿಒಗಳ ಪೈಕಿ ಎಲ್‌ಐಸಿ ಐಪಿಒ ಅತಿದೊಡ್ಡದಾಗಿರಲಿದೆ. ಇದರ ಭಾಗವಾಗಿ ವರ್ಚುವಲ್ ಆಗಿ ರೋಡ್‌ಶೋಗಳು ನಡೆಯುತ್ತಿವೆ. ಇದರಲ್ಲಿ ಪಾಲ್ಗೊಂಡಿದ್ದವರು, ಎಲ್‌ಐಸಿಯ ಹಿಂದೆ ಮಾಡಿದ್ದ ಹೂಡಿಕೆಗಳು ಹಾಗೂ ಅವು ಈಗ ಎಷ್ಟು ಲಾಭದಾಯಕವಾಗಿವೆ ಎಂಬುದರ ಬಗ್ಗೆ ಕಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ಕೆಲವು ಕಂಪನಿಗಳ ಷೇರುಗಳನ್ನು ಎಲ್‌ಐಸಿ ಈಚಿನ ವರ್ಷಗಳಲ್ಲಿ ಖರೀದಿಸಿದೆ. ಬಿಕ್ಕಟ್ಟಿಗೆ ಸಿಲುಕಿದ ಹಣಕಾಸು ಸಂಸ್ಥೆಗಳನ್ನು ಉಳಿಸಲು ಕೂಡ ಎಲ್‌ಐಸಿಯನ್ನು ಬಳಸಿಕೊಂಡ ನಿದರ್ಶನ ಇದೆ.
' ಕೇಂದ್ರ ಸರ್ಕಾರದ ಸಚಿವಾಲಯಗಳು ಎಲ್‌ಐಸಿ ಪೂರ್ತಿಯಾಗಿ ತಮ್ಮ ಅಧೀನದಲ್ಲಿ ಇದೆ ಎಂದು ಭಾವಿಸಬಹುದು. ಅಲ್ಲದೆ, ತಮಗೆ ಅಗತ್ಯ ಕಂಡಾಗಲೆಲ್ಲ ಇದು ತಮ್ಮದೇ ಕಂಪನಿ ಎಂಬಂತೆ ಒತ್ತಡ ಹೇರಬಹುದು. ಇದು ಹೂಡಿಕೆದಾರರಲ್ಲಿ ಕಳವಳಕ್ಕೆ ಕಾರಣ' ಎಂದು ಹೂಡಿಕೆದಾರರಿಗೆ ಸಲಹೆ ನೀಡುವ ಇನ್‌ಗವರ್ನ್ ಸಂಸ್ಥೆಯ ಶ್ರೀರಾಮ್ ಸುಬ್ರಮಣಿಯನ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಎಲ್‌ಐಸಿ ನಿರಾಕರಿಸಿದೆ. ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ದೊರೆತಿಲ್ಲ. ಐಪಿಒ ನಂತರದಲ್ಲಿ ಸರ್ಕಾರಿ ನಿಯಂತ್ರಣದ ಬಗ್ಗೆ ಹೂಡಿಕೆದಾರರು ಭಯಪಡುವ ಅಗತ್ಯ ಇಲ್ಲ, ತೀರ್ಮಾನಗಳನ್ನು ಎಲ್‌ಐಸಿಯ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆಯೇ ವಿನಾ ಕೇಂದ್ರ ಸರ್ಕಾರವಲ್ಲ ಎಂದು ನಿಗಮದ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ಸೋಮವಾರ ಸುದ್ದಿಗೋಷ್ಠಿಯೊಂದರಲ್ಲಿ ಸ್ಪಷ್ಪಪಡಿಸಿದ್ದಾರೆ.