ನವದೆಹಲಿ : ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿರುವ ಮುಂಗಡಪತ್ರದಲ್ಲಿ 2022-23ನೇ ಸಾಲಿನಿಂದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) 'ಡಿಜಿಟಲ್ ರೂಪಾಯಿ'ಯನ್ನು ಪರಿಚಯಿಸುವುದಾಗಿ ಪ್ರಕಟಿಸಿದ್ದಾರೆ

ಆರ್‌ಬಿಐ ಮುಂಬರುವ ಹಣಕಾಸು ವರ್ಷದಿಂದ ಬ್ಲಾಕ್‌ಚೈನ್ ತಂತ್ರಜ್ಞಾನ ಬೆಂಬಲಿತ ಸಿಬಿಡಿಸಿಗೆ ಚಾಲನೆ ನೀಡಲಿದೆ.
ಬಳಕೆದಾರರಿಗೆ ಡಿಜಿಟಲ್ ಅನುಕೂಲತೆ ಮತ್ತು ಸುರಕ್ಷತೆಯನ್ನು ಒದಗಿಸುವುದು ಹಾಗೂ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ನಿಯಂತ್ರಿತ,ಆರ್‌ಬಿಐ ಬೆಂಬಲಿತ ಚಲಾವಣೆಯನ್ನು ಒದಗಿಸುವುದು ಸಿಬಿಡಿಸಿಯ ಉದ್ದೇಶವಾಗಿದೆ.
ಮುಂಗಡಪತ್ರದಲ್ಲಿನ ಪ್ರಕಟಣೆಯು ಕ್ರಿಪ್ಟೊಕರೆನ್ಸಿಗಳು ಮತ್ತು ಇತರ ವರ್ಚುವಲ್ ಕರೆನ್ಸಿಗಳ ಕುರಿತು ಸರಕಾರದ ಉದ್ದೇಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದೆ. ಬಿಟ್ ಕಾಯಿನ್,ಈಥರ್ ಇತ್ಯಾದಿಗಳಂತಹ ಖಾಸಗಿ ಕ್ರಿಪ್ಟೊಕರೆನ್ಸಿಗಳೊಂದಿಗೆ ಅಕ್ರಮ ಹಣ ವಹಿವಾಟು, ಭಯೋತ್ಪಾದನೆಗೆ ಆರ್ಥಿಕ ನೆರವು, ತೆರಿಗೆ ವಂಚನೆ ಇತ್ಯಾದಿ ಕಳವಳಗಳನ್ನು ಹಲವಾರು ಸಲ ವ್ಯಕ್ತಪಡಿಸಿದ್ದ ಆರ್ಬಿಐ ತನ್ನದೇ ಆದ ಸಿಬಿಡಿಸಿಯನ್ನು ಘೋಷಿಸಲು ಯೋಜಿಸಿತ್ತು.
ಡಿಜಿಟಲ್ ರೂಪಾಯಿಯ ವಹಿವಾಟನ್ನು ಹೇಗೆ ನಡೆಸಬಹುದು ಎನ್ನುವುದರ ಕುರಿತು ತಂತ್ರಜ್ಞಾನ ತಜ್ಞರು ಹಲವಾರು ಮಾದರಿಗಳನ್ನು ಪ್ರಸ್ತಾವಿಸಿದ್ದಾರೆ,ಆದರೆ ಆರ್‌ಬಿಐನಿಂದ ವಿಧ್ಯುಕ್ತ ಪ್ರಕಟಣೆಯು ಜನರು ಹೇಗೆ ಡಿಜಿಟಲ್ ರೂಪಾಯಿ ವಹಿವಾಟು ನಡೆಸಬಹುದು ಎನ್ನುವುದನ್ನು ವಿವರಿಸುವ ಸಾಧ್ಯತೆಯಿದೆ. ಹಾಲಿ ಡಿಜಿಟಲ್ ಪಾವತಿ ಅನುಭವಕ್ಕೆ ಹೋಲಿಸಿದರೆ ಡಿಜಿಟಲ್ ರೂಪಾಯಿ ವಹಿವಾಟು ತಕ್ಷಣ ನಡೆಯುತ್ತದೆ ಎನ್ನುವುದು ಒಂದು ಮುಖ್ಯ ವ್ಯತ್ಯಾಸವಾಗಿರಲಿದೆ.