ನಮ್ಮ ಸಮಾಜದಲ್ಲಿ ಮತ್ತು ಅರ್ಥ ವ್ಯವಸ್ಥೆಯಲ್ಲಿ ಅಸಮಾನತೆ ಸದಾ ಇದ್ದೇ ಇತ್ತು. ಜನಸಮುದಾಯಗಳು ಮತ್ತು ಜನರು ಅದರ ಜತೆಗೇ ಬದುಕುತ್ತಿದ್ದಾರೆ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಸಮಸ್ಯೆಗಳನ್ನು ವಿವರಿಸುವ ಮತ್ತು ವಿವಿಧ ರೀತಿಯಲ್ಲಿ ಅವುಗಳನ್ನು ಪರಿಹರಿಸುವ ಪ್ರಯತ್ನಗಳು ನಡೆದಿವೆ.
ಅಂತರರಾಷ್ಟ್ರೀಯವಾಗಿ ನೋಡಿದಾಗಲೂ ಅಸಮಾನತೆಯ ಪ್ರಮಾಣ ಹೆಚ್ಚಾಗಿದೆ. ಜಾಗತಿಕ ನೆಲೆಯಲ್ಲಿ ಗಮನಿಸಿದಾಗ, ಶೇ 99ರಷ್ಟು ಜನರು ತಮ್ಮ ಆದಾಯದಲ್ಲಿ ಕುಸಿತ ಕಂಡಿದ್ದಾರೆ. 16 ಕೋಟಿ ಜನರು ಬಡತನದ ಬೇಗೆಗೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬಡ ಮತ್ತು ಶ್ರೀಮಂತ ದೇಶಗಳ ನಡುವಣ ಅಂತರ ಕೂಡ ಹೆಚ್ಚುತ್ತಲೇ ಇದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಹೊಡೆತ ಹೆಚ್ಚು ತೀವ್ರವಾಗಿದೆ. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರಂತಹ ದುರ್ಬಲ ವರ್ಗಗಳ ಮೇಲೆ ಪ್ರತಿಕೂಲ ಪರಿಣಾಮ ಹೆಚ್ಚು ಗಾಢವಾಗಿದೆ. ಅಸಮಾನತೆಯಿಂದಾದ ಹಸಿವು ಅಥವಾ ಅನಾರೋಗ್ಯದ ಕಾರಣದಿಂದ ಪ್ರತೀ ದಿನ 21 ಸಾವಿರ ಜನರು ಸಾಯುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕಕ್ಕೆ ಜಗತ್ತು ನೀಡಿದ ಪ್ರತಿಕ್ರಿಯೆಯ ರೀತಿಯು ಪ್ರತಿಯೊಂದು ರೀತಿಯ ಅಸಮಾನತೆಯನ್ನೂ ಹೆಚ್ಚಿಸಿದೆ ಎಂಬುದರತ್ತ ವರದಿಯು ಬೆಳಕು ಚೆಲ್ಲಿದೆ. 'ಅಸಮಾನತೆಯು ಅನಾರೋಗ್ಯಕರ, ಅಸಂತೃಪ್ತಿಕರ ಸಮಾಜ ನಿರ್ಮಿಸಿದ್ದಷ್ಟೇ ಅಲ್ಲದೆ, ಹಿಂಸೆಗೂ ಕಾರಣವಾಗಿದೆ. ಅಸಮಾನತೆಯು ಹಂತಕನೂ ಆಗಿದೆ' ಎಂದು ವರದಿಯ ಉಪಸಂಹಾರದಲ್ಲಿ ಹೇಳಲಾಗಿದೆ.
ಹೆಚ್ಚುತ್ತಿರುವ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಅದರ ಪರಿಣಾಮವನ್ನು ಕನಿಷ್ಠಗೊಳಿಸಲು ಕೈಗೊಳ್ಳಬಹುದಾದ ಹಲವು ಕ್ರಮಗಳು ಮತ್ತು ನೀತಿಗಳ ಬಗ್ಗೆ ವರದಿಯು ಸಲಹೆಗಳನ್ನು ಮುಂದಿಟ್ಟಿದೆ. ದುರ್ಬಲ ವರ್ಗಗಳು ಮತ್ತು ಕಾರ್ಮಿಕರಿಗೆ ಉತ್ತಮ ರಕ್ಷಣೆ ಒದಗಿಸುವುದಕ್ಕಾಗಿ ಕಾನೂನು ಚೌಕಟ್ಟಿನ ಅಗತ್ಯ ಇದೆ ಎಂದು ವರದಿಯು ಹೇಳಿದೆ. ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಈ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದರ ಪರವಾಗಿಯೂ ವರದಿಯು ವಾದಿಸಿದೆ. ಬಡ ದೇಶಗಳ ಜನರಿಗೆ ಲಸಿಕೆಯು ತ್ವರಿತವಾಗಿ ಸಿಗುವಂತಾಗಲು ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕನ್ನು ಮನ್ನಾ ಮಾಡಬೇಕಾದ ಅಗತ್ಯ ಇದೆ ಎಂದು ವರದಿಯು ಪ್ರತಿಪಾದಿಸಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಸೃಷ್ಟಿಯಾದ ಸಂಪತ್ತಿನ ಮೇಲೆ ತೆರಿಗೆ ಹೇರಬೇಕು ಎಂದು ವರದಿಯು ಸರ್ಕಾರಗಳನ್ನು ಬಲವಾಗಿ ಒತ್ತಾಯಿಸಿದೆ. ಹೀಗೆ ಸಂಗ್ರಹವಾದ ಕೋಟ್ಯಂತರ ಹಣವನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆ ಸೇವೆಗಳು, ಸಾಮಾಜಿಕ ಭದ್ರತಾ ಯೋಜನೆಗಳು, ಹವಾಮಾನ ಬದಲಾವಣೆ ತಡೆ ಕ್ರಮಗಳು, ಲಿಂಗತ್ವ ಆಧಾರಿತ ಹಿಂಸೆ ತಡೆ ಮತ್ತು ಇಂತಹ ಇತರ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದು ವರದಿಯು ಆಗ್ರಹಿಸಿದೆ. ಅಮೆರಿಕ ಮತ್ತು ಚೀನಾ ಇಂತಹ ನೀತಿ ಜಾರಿಯ ಬಗ್ಗೆ ಪರಿಶೀಲನೆ ನಡೆಸುತ್ತಿವೆ ಎಂಬುದನ್ನು ವರದಿಯು ಗುರುತಿಸಿದೆ. ಭಾರತದಲ್ಲಿ ಅಸಮಾನತೆಯ ಸಮಸ್ಯೆಯು ತೀವ್ರವಾಗಿದೆ ಮತ್ತು ದಿನ ಕಳೆದಂತೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಹಾಗಾಗಿ, ಅಸಮಾನತೆಯ ಸಮಸ್ಯೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಗೆಹರಿಸಲು ಸರ್ಕಾರವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಸಮಾನತೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಿಗೆ ಸಂಪನ್ಮೂಲ ಒದಗಿಸುವ ಹಲವು ಪ್ರಸ್ತಾವಗಳನ್ನು ಕೂಡ ವರದಿಯು ಸರ್ಕಾರಗಳ ಮುಂದಿಟ್ಟಿದೆ.