ಕಾಸರಗೋಡು: ತೀವ್ರ ಅಂತರ್ಜಲ ಕುಸಿತ ಎದುರಿಸುತ್ತಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ಅಂತರ್ಜಲ ಮಟ್ಟ ಏರಿಕೆಯಾಗಿರುವುದನ್ನು ಅಂತರ್ಜಲ ಇಲಾಖೆ ಪತ್ತೆ ಮಾಡಿದೆ. ಕಳೆದ ಹತ್ತು ವರ್ಷಗಳ ಸರಾಸರಿ ನೀರಿನ ಮಟ್ಟಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಜಿಲ್ಲಾ ಅಂತರ್ಜಲ ಅಧಿಕಾರಿ ರತೀಶ್ ಮಾಹಿತಿ ನೀಡಿದರು. 2019ರಿಂದ ಅಂತರ್ಜಲ ಮಟ್ಟ ಹೆಚ್ಚಳಗೊಳ್ಳತೊಡಗಿದೆ. ಅಂತರ್ಜಲ ಇಲಾಖೆ ಜಿಲ್ಲೆಯ ವಿವಿಧ ಬ್ಲಾಕ್‍ಗಳಲ್ಲಿ 67 ಬಾವಿಗಳ ಮೇಲೆ ನಿಗಾ ಇರಿಸಿದೆ. ಈ ಪೈಕಿ ಶೇ 83ರಷ್ಟು ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ವರ್ಷ ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 56 ವೀಕ್ಷಣಾ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದು ಕಂಡುಬಂದಿದೆ. ಸರಾಸರಿ ಅಂತರ್ಜಲ ಮಟ್ಟವು ಹತ್ತು ಸೆಂಟಿಮೀಟರ್‍ಗಳಿಂದ ಮೂರೂವರೆ ಮೀಟರ್‍ಗೆ ಹೆಚ್ಚಾಗಿದೆ.
ಕಾರಡ್ಕ ಬ್ಲಾಕ್‍ನ ಬೇಡಡ್ಕ ಪಂಚಾಯಿತಿಯ ಕುಂಡಂಕುಳಿಯಲ್ಲಿ ಅಂತರ್ಜಲಮಟ್ಟದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ಅಂತರ್ಜಲ ಮಟ್ಟ 3.452 ಮೀಟರ್ ಏರಿಕೆಯಾಗಿದೆ. ಅದೇ ರೀತಿ ಕಾಸರಗೋಡು ಬ್ಲಾಕ್‍ನ ಬದಿಯಡ್ಕದಲ್ಲಿ 2.841 ಮೀಟರ್ ಏರಿಕೆಯಾಗಿದೆ. ಇದಕ್ಕೆ ಕಳೆದ ಎರಡು ವರ್ಷಗಳಿಂದ ಸುರಿದ ಮಳೆ ಹಾಗೂ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಂಡಿರುವ ಜಲಸಂರಕ್ಷಣಾ ಚಟುವಟಿಕೆಗಳೇ ಕಾರಣ ಎನ್ನಬಹುದು.
ಅಂತರ್ಜಲ ಇಲಾಖೆಯ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ನೀರು ಪೂರೈಕೆ, ಪೌಷ್ಟಿಕಾಂಶದ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳೂ ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಬಾವಿ ಮರುಪೂರಣ ಚಟುವಟಿಕೆಗಳು, ಚೆಕ್ ಡ್ಯಾಂ ನಿರ್ಮಾಣ ಮತ್ತು ರೀಚಾಜಿರ್ಂಗ್ ಪಿಟ್ ನಿರ್ಮಾಣದಂತಹ ಚಟುವಟಿಕೆಗಳು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿವೆ. ಜಲಶಕ್ತಿ ಅಭಿಯಾನದ ಅಂಗವಾಗಿ ಕೈಗೊಂಡಿರುವ ಜಲಸಂರಕ್ಷಣಾ ಚಟುವಟಿಕೆಗಳ ಜೊತೆಗೆ ಕೆರೆಗಳ ನಿರ್ಮಾಣವೂ ಜಲಸಂವರ್ಧನೆಗೆ ಸಹಕಾರಿಯಾಗಿದೆ. ಆದರೆ ಹನ್ನೊಂದು ಕಡೆಗಳಲ್ಲಿ ಅಂತರ್ಜಲ ಕುಸಿದಿದೆ. ಮಂಜೇಶ್ವರ ಬ್ಲಾಕ್‍ನ ವರ್ಕಾಡಿ ಪಂಚಾಯತ್‍ನಲ್ಲಿ ಅಂತರ್ಜಲ ಮಟ್ಟ 2.934 ಮೀಟರ್‍ಗಳಷ್ಟು ಕುಸಿದಿದೆ. ಕಾರಡ್ಕ ಬ್ಲಾಕ್‍ನ ಕುಟ್ಟಿಕೋಲ್ ಪಂಚಾಯಿತಿಯ ಬಂದಡ್ಕದಲ್ಲಿ 2.754 ಮೀಟರ್ ಕೊರತೆಯಿದೆ. ಈ ಪ್ರದೇಶಗಳಲ್ಲಿ ತೀವ್ರ ಅಂತರ್ಜಲ ಸಮಸ್ಯೆ ಮುಂದುವರಿದಿದೆ. ವರ್ಕಾಡಿಯಲ್ಲಿ ಅಂತರ್ಜಲದ ಶೋಷಣೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ ಎಂದು ರತೀಶ್ ತಿಳಿಸಿದರು.
ಅಂತರ್ಜಲ ಇಲಾಖೆಯು ಪ್ರಸ್ತುತ 56 ಬಾವಿಗಳು ಮತ್ತು 21 ಕೊಳವೆ ಬಾವಿಗಳ ಮೇಲ್ವಿಚಾರಣೆ ನಡೆಸುತ್ತಿದೆ. ಜಲ ಸಂರಕ್ಷಣಾ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಭಾಗವಾಗಿ 48 ಹೊಸ ಬಾವಿಗಳ ಮೇಲ್ವಿಚಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿನ ಬಾವಿಗಳನ್ನು ಮೇಲ್ವಿಚಾರಣೆಗಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾವಿಗಳಲ್ಲಿನ ನೀರಿನ ಮಟ್ಟವನ್ನು ಮಾಸಿಕ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಜಲ ನೀತಿಗಳನ್ನು ರೂಪಿಸಿವೆ. ಹಿಂದಿನ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಅವರ ನೇತೃತ್ವದಲ್ಲಿ ಈಗಿನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರ ಮೇಲ್ವಿಚಾರಣೆಯಲ್ಲಿ ಆರಂಭವಾದ ಜಲಸಂರಕ್ಷಣಾ ಚಟುವಟಿಕೆಗಳು ಅಂತರ್ಜಲ ಕುಸಿದಿರುವ ನಿರ್ಣಾಯಕ ವರ್ಗದಲ್ಲಿರುವ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ.
ರಾಜ್ಯದಲ್ಲಿ ಅಂತರ್ಜಲ ಅಂದಾಜು ಸಮಿತಿಯ ಅಧ್ಯಯನದ ಪ್ರಕಾರ, ಜಿಲ್ಲೆಯ ವಿವಿಧ ಬ್ಲಾಕ್‍ಗಳನ್ನು ಅಂತರ್ಜಲ ಬಳಕೆಯ ಆಧಾರದ ಮೇಲೆ ಸುರಕ್ಷಿತ, ಅರೆ-ನಿರ್ಣಾಯಕ ಮತ್ತು ನಿರ್ಣಾಯಕ ಅತಿ-ಶೋಷಿತ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಕಾಸರಗೋಡು ಜಿಲ್ಲೆ ಪ್ರಮುಖವಾಗಿದೆ.
ಬ್ಲಾಕ್ ಕ್ರಿಟಿಕಲ್ ವಿಭಾಗದಲ್ಲಿ ಹಾಗೂ ಕಾರಡ್ಕ, ಕಾಞಂಗಾಡ್ ಮತ್ತು ಮಂಜೇಶ್ವರ ಬ್ಲಾಕ್ ಗಳು ಸೆಮಿ ಕ್ರಿಟಿಕಲ್ ವಿಭಾಗದಲ್ಲಿವೆ. ನೀಲೇಶ್ವರ ಮತ್ತು ಪರಪ್ಪ ಬ್ಲಾಕ್‍ಗಳು ಸುರಕ್ಷಿತ ವರ್ಗಕ್ಕೆ ಸೇರುತ್ತವೆ. 2017ರ ವರದಿಯು ಕಾಸರಗೋಡು ಬ್ಲಾಕ್‍ನಲ್ಲಿ ಶೇ.97.3 ರಷ್ಟು ಅಂತರ್ಜಲ ಲಭ್ಯತೆಯನ್ನು ಬಳಸಲಾಗುತ್ತಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಅಂತರ್ಜಲ ಇಲಾಖೆಯ ಸಂಶೋಧನೆಗಳು ಅಂಕಿಅಂಶಗಳು ಬದಲಾಗುವ ಸಾಧ್ಯತೆಯನ್ನು ಸೂಚಿಸುತ್ತವೆ ಎಂದು ಅವರು ಹೇಳಿದರು.