ರಾಜ್ಯಗಳು ಬಿಡುಗಡೆ ಮಾಡಿರುವ ಕೋವಿಡ್-19 ಸಾವಿನ ಅಧಿಕೃತ ಅಂಕಿಅಂಶಗಳು ʼಸತ್ಯವಲ್ಲʼ ಎಂದು ಸುಪ್ರೀಂ ಕೋರ್ಟ್ ಎತ್ತಿ ತೋರಿಸಿದೆ. ಅಲ್ಲದೆ, ತಾಂತ್ರಿಕ ಕಾರಣಗಳ ಮುಂದಿಟ್ಟು ಹಕ್ಕುಗಳನ್ನು ತಿರಸ್ಕರಿಸದೆ ಅರ್ಜಿ ಸಲ್ಲಿಸಿದ ಮೃತರ ಸಂಬಂಧಿಕರಿಗೆ ಪರಿಹಾರವನ್ನು ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ಸಾವಿನ ಕುರಿತ ಅಧಿಕೃತ ಅಂಕಿಅಂಶಗಳು ನಿಜವಲ್ಲ ಮತ್ತು COVID-19 ಸಂತ್ರಸ್ತರ ಕುಟುಂಬಗಳು ಮೋಸದ ಹಕ್ಕು ಪ್ರತಿಪಾದಿಸುತ್ತಿದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ M. R. ಶಾ ಮತ್ತು B. V. ನಾಗರತ್ನ ಅವರನ್ನೊಳಗೊಂಡ ಪೀಠ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.
ಜನಸಂಖ್ಯಾಶಾಸ್ತ್ರಜ್ಞ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರಭಾತ್ ಝಾ ಅವರ ನೇತೃತ್ವದ ತಂಡವು ಮಾಡಿದ ಅಧ್ಯಯನವು, ಜೂನ್ 2020 ರಿಂದ ಜುಲೈ 2021 ರವರೆಗೆ ಭಾರತದ ಅಂದಾಜು COVID-19 ಸಾವಿನ ಸಂಖ್ಯೆ 32 ಲಕ್ಷ ಸಮೀಪಿಸಿದೆ. ಅದರಲ್ಲಿ ಸರಿಸುಮಾರು 27 ಲಕ್ಷ ಸಾವುಗಳು ಎರಡನೇ ಅಲೆ ಒಂದರಲ್ಲೇ ನಡೆದಿದೆ. ಆದರೆ, ಸರ್ಕಾರದ ಅಧಿಕೃತ ವರದಿಯು ಕೇವಲ 4.8 ಲಕ್ಷ ಮಾತ್ರ ಸಾವನ್ನು ತೋರಿಸುತ್ತಿದೆ.
ದಿ ವೈರ್, ದಿ ವೈರ್ ಸೈನ್ಸ್, ಮತ್ತು ಇತರ ಹಲವಾರು ಮಾಧ್ಯಮಗಳು ರಾಜ್ಯ ಸರ್ಕಾರಗಳು ಪ್ರಸ್ತುತಪಡಿಸಿದ ಸಂಖ್ಯೆಗಿಂತ ಹೆಚ್ಚು ನಿಜವಾದ COVID-19 ಸಾವುಗಳು ಸಂಭವಿಸಿದೆ ಎಂದು ವರದಿ ಮಾಡಿವೆ.
ಇತ್ತೀಚಿನ ವರದಿಯು ರಾಜಸ್ಥಾನ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರ್ಚ್ 2020 ಮತ್ತು ಜೂನ್ 2021 ರ ನಡುವೆ 3,59,496 ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಹೇಳಿವೆ. ಕೇವಲ ಮೂರು ರಾಜ್ಯಗಳಲ್ಲೇ 3,59,496 ಹೆಚ್ಚುವರಿ ಸಾವುಗಳೂ ಸಂಭವಿಸಿರುವಾಗ, ಇಡೀ ದೇಶದಲ್ಲಿ ಕೋವಿಡ್‌ನಿಂದ 4,82,017 ಸಾವುಗಳಷ್ಟೇ ಸಂಭವಿಸಿದೆ ಎಂಬ ಕೇಂದ್ರದ ಅಂಕಿ ಅಂಶಗಳು ಅನುಮಾನಗಳನ್ನು ಸೃಷ್ಟಿಸಿದೆ.
ಇದಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (SLSA) ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯ ಸಾಧಿಸಲು ಮೀಸಲಾದ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸಂಬಂಧಪಟ್ಟ SLSA ಗೆ ಹೆಸರು, ವಿಳಾಸ ಮತ್ತು ಮರಣ ಪ್ರಮಾಣಪತ್ರದಂತಹ ಸಂಪೂರ್ಣ ವಿವರಗಳನ್ನು ನೀಡುವಂತೆ ಪೀಠವು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಯಾವುದೇ ಕಾರಣಗಳಿಗಿಂದಾಗಿ ಸರ್ಕಾರ ಇನ್ನೂ ಸಂಪರ್ಕಿಸದ ಸಂತ್ರಸ್ತರನ್ನು ತಲುಪುವುದು ಕಾನೂನು ಸೇವಾ ಪ್ರಾಧಿಕಾರದ ಪ್ರಯತ್ನವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶುಕ್ರವಾರದಿಂದ ಒಂದು ವಾರದೊಳಗೆ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಕೇಳಿದ್ದು, ವಿವರಗಳನ್ನು ನೀಡಲು ವಿಫಲವಾದರೆ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಎಚ್ಚರಿಸಿದೆ.
ತಾಂತ್ರಿಕ ಕಾರಣಗಳಿಗಾಗಿ ಪರಿಹಾರ ಕೋರಿ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ, ಸಂತ್ರಸ್ತರಿಗೆ ಸ್ವಲ್ಪ ಪರಿಹಾರವನ್ನು ಒದಗಿಸುವುದು ಕಲ್ಯಾಣ ರಾಜ್ಯದ ಅಂತಿಮ ಗುರಿಯಾಗಿರುವುದರಿಂದ ದೋಷಗಳನ್ನು ಸರಿಪಡಿಸಲು ಸಂಬಂಧಿಸಿದ ರಾಜ್ಯಗಳು ಅವರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
"ಪರಿಹಾರ ಕೋರಿದ ಸ್ವೀಕೃತಿಯಿಂದ ಗರಿಷ್ಠ 10 ದಿನಗಳ ಅವಧಿಯಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸುವಂತೆ ರಾಜ್ಯಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು" ಎಂದು ಸುಪ್ರೀಂ ಹೇಳಿದೆ.
ಹಿಂದಿನ ಆದೇಶದ ಹೊರತಾಗಿಯೂ, ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ COVID-19 ರ ಸಾವುಗಳ ಸಂಪೂರ್ಣ ವಿವರಗಳನ್ನು ಮತ್ತು ಪರಿಹಾರ ಪಾವತಿಯನ್ನು ಮಾಡಿದ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ನಿರ್ದೇಶಿಸಿದ್ದರೂ, ಹೆಚ್ಚಿನ ರಾಜ್ಯಗಳು ಅಂಕಿಅಂಶಗಳು ಮತ್ತು ಯಾವುದೇ ಸಂಪೂರ್ಣ ವಿವರಗಳನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ, ಪರಿಹಾರ ಕೋರಿ ಆಫ್‌ಲೈನ್‌ನಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ಆಫ್‌ಲೈನ್‌ನಲ್ಲಿ ಸಲ್ಲಿಸಲಾದ ಯಾವುದೇ ಅರ್ಜಿಯನ್ನು ತಿರಸ್ಕರಿಸಬಾರದು. ನೀನು ದಾನ ಮಾಡುತ್ತಿಲ್ಲ. ರಾಜ್ಯವಾಗಿ ಅದು ನಿಮ್ಮ ಕರ್ತವ್ಯ. ಜನರನ್ನು ಏಕೆ ಅಲ್ಲಿಂದಿಲ್ಲಿಗೆ ಅಲೆದಾಡುಸುತ್ತೀರ? ಪ್ರಾಮಾಣಿಕವಾಗಿ ಕೆಲಸ ಮಾಡಿ' ಎಂದು ಪೀಠ ಹೇಳಿದೆ.
'ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಲಾಗಿದೆ ಎಂಬ ಕಾರಣಕ್ಕಾಗಿ ಯಾವುದೇ ನಿರಾಕರಣೆ ಇರುವುದಿಲ್ಲ. ಎಲ್ಲೆಲ್ಲಿ ಅರ್ಜಿಗಳು ತಿರಸ್ಕೃತಗೊಂಡರೂ ಒಂದು ವಾರದೊಳಗೆ ಪರಿಶೀಲಿಸಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಕಾನೂನು ಸೇವಾ ಕಾರ್ಯದರ್ಶಿಯ ಸದಸ್ಯ ಕಾರ್ಯದರ್ಶಿಗೆ ಕಾರಣಗಳೊಂದಿಗೆ ವಿವರಗಳನ್ನು ನೀಡುವಂತೆ ಮಹಾರಾಷ್ಟ್ರಕ್ಕೆ ನಿರ್ದೇಶಿಸಲಾಗಿದೆ ಮತ್ತು ತಾಂತ್ರಿಕ ಕಾರಣದಿಂದ ಆ ವ್ಯಕ್ತಿಗಳಿಗೆ ತಪ್ಪುಗಳನ್ನು ಸರಿಪಡಿಸಲು ಮತ್ತು ಅರ್ಜಿಗಳನ್ನು ಮರುಪರಿಶೀಲಿಸಲು ಅವಕಾಶ ನೀಡಲಾಗುತ್ತದೆ 'ಎಂದು ಪೀಠವು ತಿಳಿಸಿದೆ.