ತಿರುವನಂತಪುರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರು ರಾಜಕೀಯ ಹತ್ಯೆಗಳು ನಡೆದಿವೆ. ಮೂವರು ಆರ್‍ಎಸ್‍ಎಸ್-ಬಿಜೆಪಿ, ಇಬ್ಬರು ಎಸ್‍ಡಿಪಿಐ ಮತ್ತು ಒಬ್ಬರು ಕಾಂಗ್ರೆಸ್‍ನವರು ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಿಳಿಸಿದರು.
ಜನರ ಪ್ರಾಣ ಮತ್ತು ಆಸ್ತಿ ರಕ್ಷಣೆ ಮಾಡುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿಯ ಮೂಗಿನ ನೇರಕ್ಕೆ ಗೂಂಡಾಗಳು ಅಟ್ಟಹಾಸ ಮೆರೆದಿದ್ದಾರೆ. ಪ್ರತಿ ಘಟನೆಯೂ ಪ್ರತ್ಯೇಕ ಘಟನೆ ಎಂದು ವಿಡಿ ಸತೀಶನ್ ಅರೋಪಿಸಿದ್ದರು. ಎಡಪಕ್ಷದ ಮುಖಂಡರೇ ಪೋಲೀಸರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ, ಹಿಂದಿನ ಯುಡಿಎಫ್ ಸರ್ಕಾರದ ಅವಧಿಯಲ್ಲಿ 1677 ಕೊಲೆ ಪ್ರಕರಣಗಳು ನಡೆದಿವೆ ಎಂದು ಮುಖ್ಯಮಂತ್ರಿ ಸದನಕ್ಕೆ ಮಾಹಿತಿ ನೀಡಿದರು. ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಿ 1516 ಕೊಲೆ ಪ್ರಕರಣಗಳು ವರದಿಯಾಗಿದ್ದವು. 2016-2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 86390 ಪ್ರಕರಣಗಳು ವರದಿಯಾಗಿವೆ. ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಸಿಪಿಎಂ ಕಾರ್ಯಕರ್ತ ಹರಿದಾಸ್ ಹತ್ಯೆ ಪ್ರಕರಣದ ತನಿಖೆ ಭರದಿಂದ ಸಾಗಿದೆ ಎಂದು ಸಿಎಂ ಹೇಳಿದ್ದಾರೆ. ಕಣ್ಣೂರಿನಲ್ಲಿ ವಿವಾಹ ಸಂಭ್ರಮಾಚರಣೆ ವೇಳೆ ಬಾಂಬ್ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಕಿಡಕಂಬಲಂ ನಲ್ಲಿ ನಡೆದ ದೀಪು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ ನಾಯಕತ್ವವು ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡುತ್ತಿದೆ. ಧೀರಜ್ ಹತ್ಯೆಯನ್ನು ಕಾಂಗ್ರೆಸ್ ಸಮರ್ಥಿಸುತ್ತದೆ ಹತ್ಯೆಯನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ಬೆಂಬಲಿಸುತ್ತಿದೆ ಎಂದು ಸಿಎಂ ಆರೋಪಿಸಿದರು.