ನವದೆಹಲಿ: ಇಲ್ಲಿನ ನ್ಯಾಯಾಲಯದಿಂದ ಪಾಕಿಸ್ತಾನಿ ಪ್ರಜೆ ಎಂದು ಘೋಷಿಸಲ್ಪಟ್ಟು, ನೆರೆಯ ದೇಶವು ತನ್ನ ಪ್ರಜೆಯಾಗಿ ಸ್ವೀಕರಿಸದ ಕಾರಣ ಏಳು ವರ್ಷಗಳಿಂದ ಬಂಧನ ಕೇಂದ್ರದಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಬೇಕೆಂದು ಕೋರಿ ಆತನ ಮಕ್ಕಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

62 ವರ್ಷದ ಮೊಹಮ್ಮದ್ ಖಮರ್ ಅವರನ್ನು 2011ರ ಆ. 8ರಂದು ಉತ್ತರಪ್ರದೇಶದ ಮೀರತ್‌ನಲ್ಲಿ ಬಂಧಿಸಲಾಗಿತ್ತು. ವೀಸಾ ಅವಧಿ ಮುಗಿದಿದ್ದರೂ ಭಾರತದಿಂದ ತೆರಳದ ಅವರನ್ನು ನ್ಯಾಯಾಲಯವು ತಪ್ಪಿತಸ್ಥ ಎಂದು ಘೋಷಿಸಿ 3 ವರ್ಷ 6 ತಿಂಗಳು ಜೈಲುಶಿಕ್ಷೆ ಹಾಗೂ ₹ 500 ದಂಡ ವಿಧಿಸಿತ್ತು.
ಶಿಕ್ಷೆಯ ಅವಧಿ ಮುಗಿದ ಬಳಿಕ 2015ರ ಫೆ. 7ರಂದು ಖಮರ್ ಅವರನ್ನು ಗಡಿಪಾರು ಮಾಡಲು ನರೇಲಾದ ಲಾಂಪುರ್‌ನ ಬಂಧನ ಕೇಂದ್ರಕ್ಕೆ ಕಳಿಸಲಾಗಿತ್ತು. ಆದರೆ, ಪಾಕಿಸ್ತಾನವು ಖಮರ್ ಅವರ ಗಡಿಪಾರಿಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ, ಅವರು ಇನ್ನೂ ಬಂಧನ ಕೇಂದ್ರದಲ್ಲಿಯೇ ದಿನ ಕಳೆಯುತ್ತಿದ್ದಾರೆ.
ನ್ಯಾಯಾಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ನ್ಯಾಯಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಖ್ ಅವರು 'ಸಮಂಜಸವಾದ ನಿರ್ಬಂಧಗಳ ಮೇಲೆ ಖಮರ್ ಅವರನ್ನು ಬಿಡುಗಡೆ ಮಾಡಿದರೆ, ಅವರ ಪತ್ನಿ ಮತ್ತು ಐದು ಮಕ್ಕಳು ಎಲ್ಲರೂ ಭಾರತೀಯ ನಾಗರಿಕರಾಗಿರುವುದರಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುತ್ತಾರೆ' ಎಂದು ಕೋರಿದರು.
ಈ ಕುರಿತು ಕೇಂದ್ರ ಸರ್ಕಾರ ಮತ್ತು ಉತ್ತರಪ್ರದೇಶದಿಂದ ಪ್ರತಿಕ್ರಿಯೆ ಕೋರಿದ ನ್ಯಾಯಪೀಠವು ಫೆ. 28ಕ್ಕೆ ವಿಚಾರಣೆಯನ್ನು ಮುಂದೂಡಿತು.