ಬುದ್ಧಿಶಕ್ತಿಯ ಜೊತೆಗೆ ಮನುಷ್ಯನ ದೇಹ ರಚನೆ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದೆ ಎಂಬುದು ಎಷ್ಟು ಸತ್ಯವೋ, ದೇಹದಲ್ಲಿನ ಪ್ರತಿಯೊಂದು ಅಂಗಾಂಗಗಳಿಗೆ ಅದರದೇ ಆದ ಕಾರ್ಯಗಳನ್ನು ಮೀಸಲಿರಿಸಿರುವುದು ನಿಜಕ್ಕೂ ಅಚ್ಚರಿಯೇ ಸರಿ. ನಮ್ಮ ದೇಹದಲ್ಲಿ ಯಾವುದೇ ಅಂಗಗಳು ತಮ್ಮ ಕಾರ್ಯ - ಚಟುವಟಿಕೆಯನ್ನು ಸ್ವಲ್ಪ ನಿಲ್ಲಿಸಿದರೂ ಕೂಡ ಅದರಿಂದ ನಮಗೆ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಕೆಲವೊಮ್ಮೆ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗಾಂಗಗಳು ಎಂದು ಗುರುತಿಸಿಕೊಂಡ ಯಾವುದನ್ನು ಸಹ ನಾವು ನಿರ್ಲಕ್ಷ್ಯ ಮಾಡುವ ಹಾಗಿಲ್ಲ.
1. ಅಂಗಾಂಗಗಳಲ್ಲಿ ಸೂಕ್ಷ್ಮಾಂಗ - ನಮ್ಮ ಕಣ್ಣುಗಳು
ಸೂಕ್ಷ್ಮಾಂಗಗಳು ಎಂದ ತಕ್ಷಣ ಮೊದಲು ನಮಗೆ ನೆನಪಿಗೆ ಬರುವುದು ನಮ್ಮ ಕಣ್ಣುಗಳು. ನಮ್ಮ ಕಣ್ಣುಗಳು ನಮ್ಮ ಮನಸ್ಸಿನ ಪ್ರತಿಬಿಂಬ ಎಂದು ಹೇಳಲಾಗುತ್ತದೆ. ನಾವು ಶಾಂತವಾಗಿದ್ದಾಗ ನಮ್ಮ ಕಣ್ಣುಗಳು ಸಾಧಾರಣವಾಗಿ ನೋಡಲು ಅಂದವಾಗಿ ಕಾಣುತ್ತವೆ ಮತ್ತು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅದೇ ನಮ್ಮ ಮನಸ್ಸಿನಲ್ಲಿ ಅಸಹನೆ, ಕೋಪ ಅಥವಾ ದುಃಖ ಇದ್ದರೆ, ನಮ್ಮ ಕಣ್ಣಾಲಿಗಳು ದೊಡ್ಡದಾಗುತ್ತವೆ ಮತ್ತು ನೋಡಲು ಕೆಂಪು ಬಣ್ಣದಲ್ಲಿ ಕಾಣುತ್ತವೆ ಮತ್ತು ಕಣ್ಣುಗಳಲ್ಲಿ ನೀರು ಕೂಡ ತುಂಬಿಕೊಳ್ಳುತ್ತದೆ. ಎಷ್ಟು ಆಶ್ಚರ್ಯ ಎನಿಸುತ್ತದೆ ಅಲ್ಲವೇ?
2. ಕಣ್ಣುಗಳ ರೆಪ್ಪೆಗಳ ಅಂಚಿನಲ್ಲಿದೆ ಒಂದು ಹೋಲ್!
ಕಣ್ಣುಗಳ ವಿಚಾರದಲ್ಲಿ ನಿಮಗೆ ಇನ್ನೊಂದು ಅಚ್ಚರಿ ವಿಷಯ ಹೇಳಬೇಕು ಎನಿಸುತ್ತಿದೆ. ಅದೇನೆಂದರೆ ನೀವು ಯಾರ ಹತ್ತಿರವಾದರೂ ನಿಂತು ಮಾತನಾಡುತ್ತಿರಬೇಕಾದರೆ, ಅವರ ಕಣ್ಣುಗಳ ರೆಪ್ಪೆಗಳ ಅಂಚುಗಳಲ್ಲಿ ಸಣ್ಣದಾದ ಒಂದು ಹೋಲ್ ಇರುವುದನ್ನು ಎಂದಾದರೂ ಗಮನಿಸಿದ್ದೀರಾ? ಕೇವಲ ಅವರಿಗೆ ಮಾತ್ರವಲ್ಲ, ನಿಮಗೂ ಅದೇ ರೀತಿ ಇರುತ್ತದೆ! ಆದರೂ ಕೂಡ ಬಹುತೇಕ ಜನರಿಗೆ ಇದು ಗೊತ್ತೇ ಇರುವುದಿಲ್ಲ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ಮತ್ತು ದಿನೇ ದಿನೇ ಅಷ್ಟೇ ವೈರಲ್ ಕೂಡ ಆಗುತ್ತಿದೆ.
ನೋಡಲು ತುಂಬಾ ಸಣ್ಣದಾಗಿರುವ ಹೋಲ್ ಗಳು ಇವಾಗಿದ್ದು, ನಮ್ಮ ಕಣ್ಣುಗಳ ಮೇಲ್ಭಾಗದ ಹಾಗೂ ಕೆಳ ಭಾಗದ ರೆಪ್ಪೆಗಳು ಕೂಡಿಕೊಳ್ಳುವ ಅಂಚುಗಳಲ್ಲಿ ಮೂಗಿನ ಪಕ್ಕದಲ್ಲಿ ಕಂಡು ಬರುತ್ತವೆ. ವೈದ್ಯಕೀಯ ಭಾಷೆಯಲ್ಲಿ ಇವುಗಳನ್ನು "lacrimal puncta/lacrimal points" ಎಂದು ಕರೆಯಲಾಗುತ್ತದೆ.
3. ಹಾಗಾದರೆ ಏನಿರಬಹುದು ಕಣ್ಣುಗಳ ಅಂಚುಗಳಲ್ಲಿ ಕಂಡು ಬರುವ ಈ ಹೋಲ್ ಗಳು? ನೋಡೋಣ ಬನ್ನಿ
ನೀವು ಗಮನಿಸಿರಬಹುದು, ಎಂದಾದರೂ ನಿಮಗೆ ದುಃಖವಾದಾಗ ಅಳು ಬಂದರೆ, ಕಣ್ಣುಗಳಲ್ಲಿ ನೀರು ಬರುತ್ತದೆ. ಎಲ್ಲರಿಗೂ ಇದು ಸಹಜ ತಾನೆ? ಆದರೆ ಮೂಗಿನಲ್ಲಿ ಏಕೆ ನೀರು ಬಂದ ಅನುಭವ ಉಂಟಾಗಬೇಕು ಅಲ್ಲವೇ! ಅದಕ್ಕೆ ಕಾರಣವೇ ಈ ಸಣ್ಣ ಹೋಲ್ ಗಳು. ಅಳು ಬಂದಾಗ ಕಣ್ಣೀರಿನ ರೂಪದಲ್ಲಿ ಹೊರಬರಲಾಗದೆ ಇರುವಂತಹ ದ್ರವ ಈ ಹೋಲ್ ಗಳ ಮೂಲಕ ಮೂಗಿನ ಹೊಳ್ಳೆಗಳಲ್ಲಿ ಹರಿಯಲು ಪ್ರಾರಂಭವಾಗುತ್ತದೆ. ಇದು ಕಣ್ಣೀರು ಬಂದಾಗ ಮಾತ್ರ ಈ ರೀತಿ ಆಗುತ್ತದೆ ಎಂದೇನಿಲ್ಲ. ನಾವು ಪ್ರತಿ ಬಾರಿ ಕಣ್ಣು ಮಿಟುಕಿಸಿದ ಸಂದರ್ಭದಲ್ಲೂ ಸಹ, ನಮ್ಮ ಗಮನಕ್ಕೆ ಬಾರದೆ ಸಣ್ಣ ಪ್ರಮಾಣದಲ್ಲಿ ಕಣ್ಣೀರಿನ ದ್ರವ ಈ ಹೋಲ್ ಗಳ ಮೂಲಕ ನಮ್ಮ ಮೂಗನ್ನು ಪ್ರವೇಶ ಮಾಡುತ್ತದೆ. ನಮಗೆ ಕಣ್ಣುಗಳಲ್ಲಿ ಸಾಕಷ್ಟು ಕಣ್ಣೀರು ಹರಿಯುವ ಸಂದರ್ಭದಲ್ಲಿ ಮಾತ್ರ ಇದು ಗೊತ್ತಾಗುತ್ತದೆ.
4. ನಾವೆಲ್ಲರೂ ಕಣ್ಣು ಮಿಟುಕಿಸುವುದು ಹೀಗೇನೇ!
ನಮ್ಮ ಕಣ್ಣಿನ ರೆಪ್ಪೆಗಳ ಬಗ್ಗೆ ಇನ್ನೊಂದು ಆಶ್ಚರ್ಯಕರ ಸುದ್ದಿ ಏನು ಗೊತ್ತಾ? ನಾವು ಇದುವರೆಗೂ ಏನೆಂದುಕೊಂಡಿದ್ದೇವೆ ಎಂದರೆ, ನಾವು ಕಣ್ಣು ಮಿಟುಕಿಸಿದಾಗ ಅಥವಾ ನಾವಾಗಿಯೇ ಕಣ್ಣು ಮುಚ್ಚಿಕೊಂಡಾಗ, ಎರಡು ರೆಪ್ಪೆಗಳು ಒಂದೇ ಬಾರಿಗೆ ಒಂದೇ ಅಂತರದಲ್ಲಿ ಮುಚ್ಚಿಕೊಳ್ಳುತ್ತವೆ ಎಂದು. ಆದರೆ ಇದು ಹಾಗಲ್ಲ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ನಾವು ಬ್ಯಾಗ್ ಜಿಪ್ ಹಾಕುವ ಸಂದರ್ಭದಲ್ಲಿ ಹೇಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮುಚ್ಚಿಕೊಂಡು ಬರುತ್ತದೆ ಅದೇ ರೀತಿ ನಮ್ಮ ಕಣ್ಣುಗಳ ರೆಪ್ಪೆಗಳು ಕೂಡ. ಸಂಶೋಧಕರ ಪ್ರಕಾರ ಅವುಗಳು ಮೊದಲು ಮುಚ್ಚಿಕೊಳ್ಳುವುದು ನಮ್ಮ ಕಿವಿಯ ಭಾಗದ ಕಡೆಗೆ. ಆನಂತರ ಮೂಗಿನ ಭಾಗದಲ್ಲಿ ಮುಚ್ಚಿಕೊಳ್ಳುತ್ತವೆ. ಆದರೆ ಈ ಸತ್ಯ ಬಹುತೇಕ ನಮ್ಮಲ್ಲಿ ಯಾರಿಗೂ ಇದುವರೆಗೂ ಗೊತ್ತಿಲ್ಲ!
ಕಣ್ಣುಗಳು ಈ ರೀತಿ ಜಿಪ್ ತರಹ ಮುಚ್ಚಿಕೊಳ್ಳುವುದರಿಂದ ನಮ್ಮ ಕಣ್ಣೊಳಗಿನ ನೀರು ಅಂದರೆ ಕಣ್ಣೀರು ನಮ್ಮ ಮೂಗಿನ ಕಡೆಗಿನ ಕಣ್ಣುಗಳ ಅಂಚಿಗೆ ಹರಿದು ಬರಲು ಪ್ರಾರಂಭವಾಗುತ್ತದೆ. ಆನಂತರ ನಮ್ಮ ಮೂಗಿನ ಅಕ್ಕ - ಪಕ್ಕಗಳಲ್ಲಿ ಕಣ್ಣೀರು ಹರಿಯುತ್ತದೆ. ಉಳಿದಂತಹ ನೀರು ಹೋಲ್ ಗಳ ಮೂಲಕ ಮೂಗನ್ನು ಪ್ರವೇಶ ಮಾಡುತ್ತದೆ.
5. ಮಕ್ಕಳಲ್ಲೂ ಸಹ ಇದೇ ಟೆಕ್ನಿಕ್!
ಸಾಕಷ್ಟು ಮಕ್ಕಳನ್ನು ನಾವು - ನೀವೆಲ್ಲ ಗಮನಿಸಿರುವ ಹಾಗೆ ಅಳುತ್ತಿರಬೇಕಾದರೆ ಕಣ್ಣೀರು ಬರುವುದಿಲ್ಲ. ಅದಕ್ಕೆ ಕಾರಣ ಮಕ್ಕಳಲ್ಲಿ ಕಣ್ಣೀರಿನ ಗ್ರಂಥಿಗಳು ಕಟ್ಟಿಕೊಂಡಿರುತ್ತವೆ ಜೊತೆಗೆ ಈ ಹೋಲ್ ಗಳು ಸಹ ಬ್ಲಾಕ್ ಆಗಿರುತ್ತವೆ. ಪೋಷಕರು ಈ ಬಗ್ಗೆ ಮೊದಲು ಗಮನ ವಹಿಸಬೇಕು ಮತ್ತು ತಮ್ಮ ಪುಟಾಣಿ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಏಕೆಂದರೆ ಈ ಹೋಲ್ ಗಳು ನಮ್ಮ ಕಣ್ಣುಗಳಿಂದ ಕಣ್ಣೀರನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತವೆ. ಮಕ್ಕಳಿಗೂ ಅಷ್ಟೇ!
6. ಫೈನಲ್ ಆಗಿ ಏನು ಹೇಳಬಹುದು?
ಈಗ ಇನ್ನೊಂದು ಆಶ್ಚರ್ಯಕರ ಸುದ್ದಿ ಏನು ಗೊತ್ತಾ? ಕೇವಲ ಹತ್ತಿಪ್ಪತ್ತು ಸೆಕೆಂಡ್ ಗಳ ಹಿಂದೆ ನಿಮಗೆ ಈ ವಿಷಯ ಗೊತ್ತೇ ಇರಲಿಲ್ಲ ಅಥವಾ ನೀವು ಹುಟ್ಟಿ ಇಷ್ಟು ವರ್ಷಗಳು ಕಳೆದಿದ್ದರೂ ಈ ಬಗ್ಗೆ ನಿಮಗೆ ಯಾರೂ ಹೇಳಿರಲಿಲ್ಲ. ಇದನ್ನು ತಿಳಿದು ನಿಮಗೆ ಖಂಡಿತವಾಗಿ ಆಶ್ಚರ್ಯ ಮತ್ತು ಹೆಮ್ಮೆ ಆಗಿರುತ್ತದೆ. ಒಂದು ವೇಳೆ ಈ ಹೋಲ್ ಗಳು ಮುಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? ಸಾಮಾನ್ಯ ಸಂದರ್ಭಗಳಲ್ಲಿ ಕೂಡ ನಿಮ್ಮ ಕಣ್ಣುಗಳಲ್ಲಿ ಸಾಕಷ್ಟು ನೀರು ತುಂಬಿಕೊಳ್ಳುತ್ತದೆ. ನಿಮ್ಮ ಕಣ್ಣುಗಳಿಗೆ ಬೇರೆ ಏನು ಸಹ ಕಾಣುವುದಿಲ್ಲ. ಹಾಗಾಗಿಯೇ ಇದನ್ನು ಮಾನವನಿಗೆ ನೈಸರ್ಗಿಕವಾಗಿ ಬಂದ ವರದಾನ ಅಥವಾ ಚಮತ್ಕಾರ ಎಂದು ಕರೆಯಬಹುದಲ್ಲವೇ?