ಮಗುವೊಂದಕ್ಕೆ ಜನ್ಮ ನೀಡಿದಾಗ ಆ ತಾಯಿಗೆ ಅದು ಮರುಜನ್ಮ ಎಂದು ಹೇಳಲಾಗುವುದು. ಗರ್ಭಿಣಿಯಾದಾಗ ಅವಳ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ, ಬರೀ ದೇಹದಲ್ಲಿ ಮಾತ್ರವಲ್ಲ ಮಾನಸಿಕ ಸ್ಥಿತಿಯಲ್ಲೂ ಬದಲಾವಣೆಯಾಗಿರುತ್ತದೆ, ಹೆರಿಗೆ ಸಮಯ ಹತ್ತಿರ ಬರುತ್ತಿದ್ದಂತೆ ಹೆಚ್ಚಿನವರಲ್ಲಿ ಒಂದು ರೀತಿಯ ಆತಂಕ ಉಂಟಾಗುವುದು. ಹೆರಿಗೆ ನೋವಿನ ಬಗ್ಗೆ ಕೇಳಿರುವ ಮಾತುಗಳು ಅವಳ ಆತಂಕವನ್ನು ಮತ್ತಷ್ಟು ಹೆಚ್ಚಿಸುವುದು.
ನಾರ್ಮಲ್ ಆಗಿರಲಿ ಸಿ-ಸೆಕ್ಷನ್ ಆಗಿರಲಿ ಆ ಸಂದರ್ಭದಲ್ಲಿ ಅವಳು ಅನುಭವಿಸುವ ನೋವು ಅವಳಿಗಷ್ಟೇ ಗೊತ್ತು, ನಾರ್ಮಲ್ ಆದರೆ ಜನ ಓಹೋ ಸುಖ ಪ್ರಸವ, ಏನೂ ತೊಂದರೆಯಿಲ್ಲ ಅಂತಾರೆ, ಆದರೆ ಸ್ವಿಚರ್ ಹಾಕಿರುವ ನೋವು ಅವಳಿಗಷ್ಟೇ ಗೊತ್ತು, ಸಿ-ಸೆಕ್ಷನ್ ಆದರೆ ಅಸಾಧ್ಯವಾದ ತಲೆ ನೋವು, ಜೊತೆಗೆ ಸ್ಟಿಚ್ ಹಾಕಿದ್ದಲ್ಲಿ ನೋವು... ಇದರ ಜೊತೆಗೆ ಮಗುವಿಗೆ ಎದೆ ಹಾಲುಣಿಸಬೇಕು. ಪ್ರತೀ ಎರಡು ಗಂಟೆಗೊಮ್ಮೆ ಎದ್ದು ಮಗುವಿಗೆ ಹಾಲುಣಿಸಬೇಕು.
ನೋವು, ಮೈಯಲ್ಲಿ ನಿತ್ರಾಣ, ಸರಿಯಾಗಿ ನಿದ್ದೆಯಿಲ್ಲ, ಹಾಲು ತುಂಬಿ ಸೋರುವ ಎದೆ ಇವೆಲ್ಲಾ ಅವಳಿಗೆ ಒಂದು ರೀತಿಯ ಹೊಸ ಅನುಭವ, ಮಗುವಿನ ಮುದ್ದಾದ ಮುಖ ನೋಡಿದಾಗ ತನ್ನೆಲ್ಲಾ ನೋವು ಮರೆತರೂ ಆ ಸಮಯದಲ್ಲಿ ಅವಳಿಗೆ ಮನೆಯವರ ಪ್ರೀತಿ, ಆರೈಕೆಯೂ ಮುಖ್ಯವಾಗಿ ಬೇಕಾಗುತ್ತದೆ. ಅವಳು ದೈಹಿಕವಾಗಿ, ಮಾನಸಿಕವಾಗಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ, ಅದರಲ್ಲೂ ಕೆಲ ಹೆಣ್ಮಕ್ಕಳ ಮನಸ್ಸು ತುಂಬಾನೇ ದುರ್ಬಲವಾಗಿರುತ್ತದೆ ಅಂಥವರಲ್ಲಿ ಖಿನ್ನತೆ ಉಂಟಾಗುವುದು. ಅದನ್ನು ಆಡು ಭಾಷೆಯಲ್ಲಿ ಬಾಣಂತಿ ಸನ್ನಿ ಎಂದು ಕರೆಯಲಾಗುವುದು. ಬಾಣಂತಿ ಸನ್ನಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.ಬಾಣಂತಿ ಸನ್ನಿ ಬಾಣಂತಿ ಸನ್ನಿ ಎಂಬುವುದು ಹೆರಿಗೆಯ ಬಳಿಕ ಕಂಡು ಬರುವ ದೈಹಿಕ, ಭಾವನಾತ್ಮಕ, ನಡವಳಿಕೆಯ ವ್ಯತ್ಯಾಸವಾಗಿದೆ. ಈ ರೀತಿಯ ವ್ಯತ್ಯಾಸ ಕೆಲ ಮಹಿಳೆಯರಲ್ಲಿ ಮಾತ್ರ ಕಂಡು ಬರುವುದು. ಹೆರಿಗೆಯಾಗಿ ತಿಂಗಳು ಕಳೆದ ಮೇಲೆ ಈ ರೀತಿಯ ಖಿನ್ನತೆ ಲಕ್ಷಣಗಳು ಕಂಡು ಬರುವುದು. ತಾಯ್ತನದ ಹೊಸ ಅನುಭವ ಕೆಲವರಲ್ಲಿ ಆ ರೀತಿಯ ಬದಲಾವಣೆಗಳನ್ನು ಉಂಟು ಮಾಡುವುದು. ಹೆರಿಗೆಯ ಬಳಿಕ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಸಂತಾನೋತ್ಪತ್ತಿ ಹಾರ್ಮೋನ್ ಗರ್ಭಾವಸ್ಥೆಯಲ್ಲಿ 10 ಪಟ್ಟು ಅಧಿಕವಿರುತ್ತದೆ, ಅದು ಹೆರಿಗೆಯಾದ ಮೇಲೆ ಇದ್ದಕ್ಕಿದ್ದಂತೆ ಕಡಿಮೆಯಾಗುವುದು. ಹೆರಿಗೆಯಾಗಿ ಮೂರನೇ ದಿನಕ್ಕೆ ಆ ಹಾರ್ಮೋನ್‌ಗಳು ಕಡಿಮೆಯಾಗಿ ಗರ್ಭಾವಸ್ಥೆಗೆ ಮೊದಲು ಎಷ್ಟಿತ್ತೋ ಅಷ್ಟಿರುತ್ತದೆ, ಅಲ್ಲದೆ ದೇಹದಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳು ಉಂಟಾಗುವುದು, ಇವು ಖಿನ್ನತೆಯನ್ನು ಉಂಟು ಮಾಡುವುದು. ಇದನ್ನು ಬೇಬಿ ಬ್ಲೂ ಎಂದು ಕರೆಯಲಾಗುವುದು. 10ರಲ್ಲಿ ಒಬ್ಬರಿಗೆ ಈ ರೀತಿ ಕಂಡು ಬರುವುದು, ಇದು ಗಂಭೀರವಾದರೆ ಮಾತ್ರ ಅಪಾಯ. ಮಗುವಿನ ಜನನದ ಬಳಿಕ ಕೆಲ ತಂದೆಯರಲ್ಲೂ ಬದಲಾವಣೆ ಕಂಡು ಬರುವುದು. ಹತ್ತರಲ್ಲಿ ಒಬ್ಬರಿಗೆ ಖಿನ್ನತೆ ಕಂಡು ಬರುವುದು. ಹೊಸ ಜವಾಬ್ದಾರಿ ನಿಭಾಯಿಸುವುದು ಹೇಗೆ ಎಂಬ ಚಿಂತೆಯಲ್ಲಿ ಖಿನ್ನತೆ ಉಂಟಾಗುವುದು.
ಖಿನ್ನತೆ ಹೆಚ್ಚಾದರೆ ಕಂಡು ಬರುವ ಲಕ್ಷಣಗಳು * ಮಗುವಿನ ಮೇಲೆ ಗಮನ ಹರಿಸದಿರುವುದು, ಮಗುವಿನ ಮೇಲೆ ಅಕ್ಕರೆ ತೋರಿಸದಿರುವುದು * ಕಾರಣವಿಲ್ಲದೇ ಅಳುವುದು * ಮಂಕಾಗಿರುವುದು * ಬೇಗನೆ ಕೋಪಗೊಳ್ಳುವುದು, ಒಂಥರಾ ಕಿರಿಕಿರಿ ವರ್ತನೆ * ಖುಷಿ ಇಲ್ಲದಿರುವುದು * ನನ್ನಿಂದ ಪ್ರಯೋಜನವಿಲ್ಲ, ನನ್ನಿಂದ ಸಾಧ್ಯವಿಲ್ಲ ಎಂಬಂಥ ಮಾತುಗಳನ್ನಾಡುವುದು * ಸಾಯಬೇಕೆನಿಸುವುದು * ಏನಾದರೂ ನಿರ್ಧಾರ ತೆಗೆದುಕೊಳ್ಳಲು ಗೊಂದಲ
ಬಾಣಂತಿ ಸನ್ನಿಗೆ ಯಾವಾಗ ಚಿಕಿತ್ಸೆ ನೀಡದಿದ್ದರೆ ಅಪಾಯ ತಪ್ಪಿದ್ದಲ್ಲ * ಖಿನ್ನತೆ 2 ವಾರಗಳಿಗಿಂತ ಅಧಿಕವಿದ್ದರೆ * ಅವರಿಗೆ ತಮ್ಮ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ * ಪ್ರತಿನಿತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ * ಮಗುವಿಗೆ ಏನಾದರೂ ಮಾಡಬಹುದು ಅಥವಾ ತಾವು ಆತ್ಮಹತ್ಯೆಗೆ ಪ್ರಯತ್ನಿಸಬಹುದು * ಅವರಲ್ಲಿ ತುಂಬಾ ಭಯವಿರುತ್ತೆ, ಒತ್ತಡಕ್ಕೆ ಒಳಗಾಗಿರುತ್ತಾರೆ.
ಬಾಣಂತಿ ಖಿನ್ನತೆಗೆ ಕಾರಣವೇನು? ಖಿನ್ನತೆ ಅನೇಕ ಕಾರಣಗಳಿಂದ ಉಂಟಾಗಬಹುದು. ಹಾರ್ಮೋನ್‌ಗಳ ಬದಲಾವನೆ, ಸರಿಯಾಗಿ ಆರೈಕೆ ಇಲ್ಲದಿರುವುದು ಹಾಗೂ ಈ ಕೆಳಗಿನ ಕಾರಣಗಳಿಂದ ಖಿನ್ನತೆ ಉಂಟಾಗಬಹುದು: * ಗರ್ಭಿಣಿಯಾಗುವ ಮುನ್ನ ಅಥವಾ ಗರ್ಭಾವಸ್ಥೆಯಲ್ಲಿ ಖಿನ್ನತೆ ಉಂಟಾಗಿದ್ದರೆ * ತುಂಬಾ ಚಿಕ್ಕ ವಯಸ್ಸಿನಲ್ಲಿ ಹೆರಿಗೆಯಾಗಿದ್ದರೆ * ಹೆರಿಗೆ ಬಗ್ಗೆ ತುಂಬಾ ಭಯ * ತುಂಬಾ ಮಕ್ಕಳಿದ್ದರೆ * ಕುಟುಂಬದಲ್ಲಿ ಯಾರಿಗಾದರೂ ಬಾಣಂತಿ ಸನ್ನಿಯಾಗಿದ್ದರೆ * ತುಂಬಾ ಒತ್ತಡದ ಪರಿಸ್ಥಿತಿ ಎದುರಾಗಿದ್ದರೆ ಅಂದರೆ ಕೆಲಸ ಕಳೆದುಕೊಳ್ಳುವ ಆತಂಕ, ಆರೋಗ್ಯ ಸಮಸ್ಯೆ * ಆರೋಗ್ಯ ಸಮಸ್ಯೆ ಇರುವ ಮಗು ಹುಟ್ಟಿದರೆ * ಅವಳಿ ಅಥವಾ ತ್ರಿವಳಿ ಜನಿಸಿದಾಗ * ಮನೆಯವರ ಬೆಂಬಲ, ಆರೈಕೆ ಕಡಿಮೆ ಇದ್ದಾಗ * ಒಂಟಿ ಎಂದು ಅನಿಸಿದಾಗ * ವೈವಾಹಿಕ ಜೀವನದಲ್ಲಿ ತೊಂದರೆಯಿದ್ದಾಗ ಬಾಣಂತಿ ಸನ್ನಿಗೆ ಇಂಥದ್ದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ, ದೈಹಿಕ ಹಾಗೂ ಭಾವನಾತ್ಮಕ ಬದಲಾವಣೆಗಳಾದ ಉಂಟಾಗುವುದು. ಬಾಣಂತಿ ಸನ್ನಿಗೆ ಚಿಕಿತ್ಸೆಯೇನು? * ಬಾಣಂತಿ ಸನ್ನಿ ಕಾಣಿಸಿಕೊಂಡರೆ ಅದರ ಗಂಭೀರತೆ ಮೇಲೆ ಚಿಕಿತ್ಸೆ ನಿಡಲಾಗುವುದು. * ಕೆಲವರಿಗೆ ಕೌನ್ಸಿಲಿಂಗ್ ಮಾಡಲಾಗುವುದು. * ಖಿನ್ನತೆ ಕಡಿಮೆ ಮಾಡಲು ಮಾತ್ರೆಗಳನ್ನು ನೀಡಲಾಗುವುದು. * ಖಿನ್ನತೆ ತುಂಬಾ ಗಂಭೀರವಾಗಿದ್ದರೆ brexanolone (Zulresso) ನೀಡಲಾಗುವುದು. * ಕೆಲವೊಂದು ಕೇಸ್‌ಗಳಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಎದೆ ಹಾಲುಣಿಸುವ ತಾಯಂದಿರು ಮಾತ್ರೆಗಳನ್ನು ತಾವೇ ತೆಗೆದುಕೊಳ್ಳುವಂತಿಲ್ಲ, ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಮಗುವಿನ ಮೇಲೆ ಪರಿಣಾಮ ಬೀರುವುದು.