ಇಂತಿಪ್ಪ ಭಾರತ ವರ್ಷದ ವಿಸ್ತಾರ ಕರೆಗಾಳಿಗೆ ಚಾಚಿಕೊಂಡಿರುವ ತುಳುನಾಡು ಮತ್ತೊಂದು ಮಗ್ಗುಲಲ್ಲಿ ಮಿಗಿಲೆನಿಪ ಫ್ರೌಢಿಮೆಯೊಳ್ ತಗೆ-ತಂಗಡಿ ಸ್ನೇಹದೊಳ್ ಕರೆವುದು...ಕರೆದು ನಲಿವುದು..ಅಪ್ಪೆ ಇಲ್ ನಿನಗೆ ನೆಮ್ಮದಿಯ ಬೊಮ್ಮನ ನೆಲವೆಂದು ತಂಪೆರೆವುದು.
ಹೌದು....ಇಲ್ಲಿಯ ಜೀವನ ಪದ್ದತಿಯೇ ಬಹು ವಿಶಿಷ್ಟ. ದ್ರಾವಿಡ ಪರಂಪರೆಯ ಅತಿ ಹಿರಿಯ ಸಾಂಸ್ಕ್ರತಿಕ ನೆಲೆಗಟ್ಟು ನೀಡಿರುವ ಕೊಡುಗೆ ಸಾಗರದೋಪಾದಿಯಲ್ಲಿ ಈಗ ಪೆರ್ಮೆಗೊಳಿಪವು.
ಭೂಮಿಯನ್ನು ಹೆಣ್ಣೆಂದೇ ಪರಿಭಾವಿಸಿ ಆರಾಧಿಸುವುದು ಬೂಮಿ ಅಪ್ಪೆ ಎಂಬ ನಂಬಿಕೆಯ ಹಿನ್ನೆಲೆ ಇಲ್ಲಿಯ ಗಟ್ಟಿತನ. ಎಲ್ಲಾ ಆಚರಣೆಗಳಲ್ಲೂ ಪ್ರಕೃತಿ ಪ್ರೇಮ, ಅಂತಃಕರಣ, ಮಾನವೀಯ ಸಂಬಂಧಗಳು ಎದ್ದುಕಾಣುತ್ತವೆ. ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುತ್ತಾಳೆ ಎಂಬ ನಂಬಿಕೆ ತುಳುನಾಡಲ್ಲಿದೆ. ಆ ದಿನವೇ ಕೆಡ್ಡಸ. ಇದೊಂದು ಜನಪದ ಗ್ರಹಿಕೆಯಾಗಿದ್ದರೂ, ತುಳುವರಿಗೆ ಇದೊಂದು ವಿಶಿಷ್ಟ ಪರ್ವದಿನ.
ಯಾವಾಗ ಕೆಡ್ಡಸ?
ತೌಳವ ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಇಂದು ಮಧ್ಯಾಹ್ನ ಕೆಡ್ಡಸ ಆರಂಭವಾಗಿದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ಧ. ಯಾಕೆಂದರೆ ಭೂಮಿ ರಜಸ್ವಲೆಯಾಗಿರುವಾಗ ಕೃಷಿಕಾರ್ಯದಲ್ಲಿ ತೊಡಗಿ ಭೂಮಿಗೆ ನೋವುಂಟು ಮಾಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ.
ಕೆಡ್ಡಸ ವೇಳೆ ಪೂಜಿಸುವವರು ಸ್ತ್ರೀಯರು. ಅಂಗಳದ ಒಂದು ಮೂಲೆಯಲ್ಲಿ ಗೋಮಯದಿಂದ ಶುದ್ಧೀಕರಿಸಿದ ಜಾಗದಲ್ಲಿ ವಿಭೂತಿಯಿಂದ ವೃತ್ತ ರಚಿಸಿ ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜೆಕತ್ತಿ (ಕಿರುಗತ್ತಿ), ತೆಂಗಿನ ಗರಿಯ ಹಸಿ ಕಡ್ಡಿಯನ್ನಿಟ್ಟು ಮಾಡಿದ ಸಾಂಕೇತಿಕವಾದ 'ಭೂಮಿ'ತಾಯಿಯೇ ಇಲ್ಲಿ ಪೂಜನೀಯಳು.
ಕೆಡ್ಡಸದ ಮೊದಲನೆಯ ದಿನ ಬೆಳಗ್ಗೆ ಹೆಂಗಸರು ನವಧಾನ್ಯಗಳನ್ನು ಹುರಿಯುತ್ತಾರೆ. ಈ ನವಧಾನ್ಯಗಳಲ್ಲಿ ಹುರುಳಿ ಮುಖ್ಯವಾದುದು. ಹುರಿದ ನವಧಾನ್ಯಗಳಿಗೆ ಬೆಲ್ಲ ಹಾಗೂ ತೆಂಗಿನಕಾಯಿ ಚೂರುಗಳನ್ನು ಬೆರೆಸಿ ಅಗ್ರದ ಬಾಳೆಲೆಯಲ್ಲಿಟ್ಟು ಭೂ ದೇವಿಗೆ ನಮಿಸುತ್ತಾರೆ. ಈ ಹುರಿದ ಧಾನ್ಯಗಳಿಗೆ ತುಳುವಿನಲ್ಲಿ ಕೆಡ್ಡಸದ 'ಕುಡುಅರಿ' ಅಥವಾ 'ನನ್ನೆರಿ' ಎನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ನುಗ್ಗೆ ಪಲ್ಯ ಮತ್ತು ನುಗ್ಗೆ ಮತ್ತು ಬದನೆ ಸೇರಿಸಿ ಮಾಡಿದ ಪದಾರ್ಥ ವಿಶೇಷ.
ಕೆಡ್ಡಸದ ಬೇಟೆ ಗಮ್ಮತ್ತು
ನಡು ಕೆಡ್ಡಸದ ದಿನ 'ದೊಡ್ಡ ಬೇಟೆ' ಸಂಪ್ರದಾಯವಿದೆ. ಹಾಗಾಗಿ ಊರಿನವರೆಲ್ಲಾ ಸೇರಿ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಬೇಟೆಯಾಡಿ ಸಿಕ್ಕ ಪ್ರಾಣಿಗಳನ್ನು ಎಲ್ಲರೂ ಹಂಚಿ ತಿನ್ನುವುದು ವಾಡಿಕೆ. ಕೆಡ್ಡಸದ ಬೋಂಟೆ ಎಂಬುದು ಇಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.
ಕಡೆ ಕೆಡ್ಡಸ
ಮೂರನೇ ದಿನ ಬೆಳಗ್ಗೆ ಮುತ್ತೈದೆಯರು ಶುಚೀಭೂತರಾಗಿ ಭೂಮಿ ಬರೆದಲ್ಲಿ ಏಳು ಲೋಳೆರಸವುಳ್ಳ ಸೊಪ್ಪುಗಳನ್ನು (ಅದರ ತುದಿ ಪಶ್ಚಿಮಕ್ಕಿರಬೇಕು) ಸಾಲಾಗಿರಿಸಿ, ದೀಪವನ್ನಿರಿಸುತ್ತಾರೆ. ಪಕ್ಕದಲ್ಲಿ ಅರಶಿನ, ಕುಂಕುಮ, ಕಾಡಿಗೆ, ಎಣ್ಣೆ, ಸೀಗೆ, ಬಾಗೆಗಳ ತೊಗಟೆ, ಪಚ್ಚೆ ಹೆಸರುಬೇಳೆ ಪುಡಿ, ವೀಳ್ಯ, ಊದುಬತ್ತಿಗಳನ್ನಿರಿಸುತ್ತಾರೆ.
ಭೂತಾಯಿಯ ಸಿಂಗಾರಕ್ಕಾಗಿ ಕನ್ನಡಿ, ಬಾಚಣಿಗೆ ಹಾಗೂ ಕರಿಮಣಿಗಳನ್ನಿಡುವ ಸಂಪ್ರದಾಯವೂ ಕೆಲವೆಡೆ ಉಂಟು. ಸಿಂಗಾರಗೊಂಡಿರುವ ಆಕೆಯನ್ನು ಬರ ಮಾಡಿಕೊಳ್ಳಲು ಹೊಸ್ತಿಲಲ್ಲಿ ರಂಗೋಲಿ ಬಿಡಿಸಿ 'ಎಡೆ'ಯನ್ನು ಅಗ್ರದ ಬಾಳೆಯಲ್ಲಿಟ್ಟು ಭೂಮಿಗೆ ಅರ್ಪಿಸಲಾಗುತ್ತದೆ.
ಮರುದಿನ ಮುಂಜಾನೆ ಮುತ್ತೈದೆಯರು ಭೂಮಿಗೆ ಎಣ್ಣೆ ಹೊಯ್ಯುತ್ತಾರೆ. ಈ ಕ್ರಿಯೆಯಲ್ಲಿ ಸ್ನಾನಕ್ಕೆ ಉಪಯೋಗಿಸುವ ಸೀಗೆ, ಪಚ್ಚೆ ಹಸಿರುಬೇಳೆ ಪುಡಿ, ಸರೋಳಿ ರಸ ಇತ್ಯಾದಿಗಳನ್ನು ಭೂಮಿಗೆ ಚೆಲ್ಲಲಾಗುತ್ತದೆ. ಆಮೇಲೆ ಆ ಜಾಗವನ್ನು ಶುದ್ಧೀಕರಿಸಿ ಹೂ, ಗಂಧ, ವೀಳ್ಯ, ದೀಪಗಳನ್ನಿರಿಸಿ ಸಂತಾನ, ಸಂಪತ್ತು, ಫಲಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಕ್ರಿಯೆಯೊಂದಿಗೆ ಕೆಡ್ಡಸ ಆಚರಣೆ ಸಂಪೂರ್ಣಗೊಳ್ಳುತ್ತದೆ.
ಕೆಡ್ಡಸದ ಗಾಳಿ
ಕೆಡ್ಡಸ ಆರಂಭದ ಕೆಲವು ದಿನಗಳ ಮೊದಲು ವಾತಾವರಣದಲ್ಲಿ ಸಮಶೀತೋಷ್ಣ ಗಾಳಿ ಬೀಸುತ್ತದೆ. ಈ ಗಾಳಿಗೆ ಕೆಡ್ಡಸದ ಗಾಳಿ ಎಂದೇ ಹೆಸರು. ಋತುಸ್ನಾನ ಮುಗಿಸಿ ಫಲದಾತೆಯಾಗಲು ಸಜ್ಜಾಗಿರುವ ಭೂದೇವಿ ಈ ಗಾಳಿಯ ಸುಖಸ್ಪರ್ಶದಿಂದ ಪುಳಕಗೊಳ್ಳುತ್ತಾಳೆ ಎಂಬ ಪ್ರತೀತಿ ಜನಪದದಲ್ಲಿದೆ.
ಕರಾವಳಿಯ ನಲಿಕೆ ಜನಾಂಗದವರು ಮನೆಮನೆ ಬಂದು ಕರೆ ಕಳಿಸುತ್ತಾರೆ ಅದು ಹೀಗೆ ಇದೆ.
ಸೋಮವಾರ ಕೆಡ್ಡಸ,
ಮುಟ್ಟುನೆ ಅಂಗಾರ ನಡು ಕೆಡ್ಡಸ
ಬುಧವಾರ ಬಿರಿಪುನೆ
ಪಜಿ ಕಡ್ಪರೆ ಬಲ್ಲಿ
ಉನುಂಗೆಲ್ ಪೊಲಿಪ್ಯರೆ ಬಲ್ಲಿ,
ಅರಸುಲೆ ಬೋಟೆಂಗ್
ಸರ್ವೆರ್ ಉಲ್ಲಾಯನಕುಲು ಪೋವೋಡುಗೆ.
ವಲಸಾರಿ ಮಜಲ್ಡ್ ಕೂಡ್ದು
ವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ
ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು.
ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು.
ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ.
ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ,
ಕೈಲ ಕಡೆಲ ಪತ್ತ್ದ್
ಉಜ್ಜೆರ್ಗೊಂಜಿ ಎರ್ಪು ಏರ್ಪಾದ್
ಇಲ್ಲ ಬೇತ್ತಡಿತ್ ಉಂತೊಂದು
ಮುರ್ಗೊಲೆಗ್ ತಾಂಟಾವೊಡು.
ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.
ಎಂಕ್ ಅಯಿತ ಕೆಬಿ, ಕಾರ್,ಕ್ಯೆ,
ಉಪ್ಪು, ಮುಂಚಿ, ಪುಳಿ ಕೊರೊಡು.....
ಹೀಗೆ ಮುಂದುವರಿಯುತ್ತದೆ ಜನಪದ ಕಾವ್ಯ.