ನವದೆಹಲಿ: ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿಗಳ ಕುರಿತು ತೀವ್ರ ವಾಗ್ದಾಳಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯದ ಭಾಷಣವನ್ನು ಅಂತ್ಯಗೊಳಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ದೇಶದ ಅಭಿವೃದ್ಧಿ ಮಾಡಲಿಲ್ಲ. ಈಗ ಪ್ರತಿಪಕ್ಷದಲ್ಲಿರುವಾಗ ದೇಶದ ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ರಾಷ್ಟ್ರದ ಪರಿಕಲ್ಪನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ರಾಷ್ಟ್ರದ ಪರಿಕಲ್ಪನೆ ಅಸಂವಿಧಾನಿಕವಾದರೆ ಏಕೆ ಅವರ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಕರೆಯಲಾಗುತ್ತದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಒಂದು ರೀತಿಯಲ್ಲಿ ನಗರ ನಕ್ಸಲೀಯರ ಹಿಡಿತದಲ್ಲಿದೆ. ಅದರ ಚಿಂತನೆಗಳು ಮತ್ತು ಸಿದ್ಧಾಂತಗಳನ್ನು ಅವರು ನಿಯಂತ್ರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ಸಿಖ್ಕರ ಸಾಮೂಹಿಕ ಹತ್ಯೆ ನಡೆಯುತ್ತಿರಲಿಲ್ಲ, ಹಲವು ವರ್ಷಗಳಿಂದ ಉಗ್ರರ ಜ್ವಾಲೆಯಲ್ಲಿ ಪಂಜಾಬ್ ಉರಿಯುತ್ತಿರಲಿಲ್ಲ. ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ತೊರೆಯುವ ಅಗತ್ಯವಿರಲಿಲ್ಲ. ಕಾಂಗ್ರೆಸ್ ಇಲ್ಲದಿದ್ದರೆ ಹೆಣ್ಣು ಮಕ್ಕಳನ್ನು ತಂದೂರ್ ನಲ್ಲಿ ಎಸೆಯುತ್ತಿದ್ದ ಘಟನೆಗಳು ನಡೆಯುತ್ತಿರಲಿಲ್ಲ ಎಂದರು.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಮುಂಬೈ ತೊರೆಯಲು ವಲಸೆ ಕಾರ್ಮಿಕರಿಗೆ ನೀವು(ಕಾಂಗ್ರೆಸ್) ಉಚಿತ ರೈಲು ಟಿಕೆಟ್ ನೀಡಿದ್ದೀರಿ. ಅದೇ ವೇಳೆ, ದೆಹಲಿ ಸರ್ಕಾರ ವಲಸೆ ಕಾರ್ಮಿಕರು ನಗರ ತೊರೆಯುವಂತೆ ಹೇಳಿ, ಬಸ್ ವ್ಯವಸ್ಥೆ ಮಾಡುತ್ತದೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಸೋಂಕು ತೀವ್ರ ಗತಿಯಲ್ಲಿ ವ್ಯಾಪಿಸಲು ಇದೇ ಕಾರಣ ಎಂದು ನರೇಂದ್ರ ಮೋದಿ ಹೇಳಿದರು.