ಕೊಚ್ಚಿ: ಪಿ.ಪಿ ಜೇಕಬ್ ಅವರು ಕೇರಳದ ಕೊಚ್ಚಿ ಬಂದರಿನಲ್ಲಿ ಅಗ್ನಿಶಾಮಕದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ಕೆಲಸದಿಂದ ನಿವೃತ್ತಿಯಾದ ಬಳಿಕ ಹೊಸದೊಂದು ವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಆ ಹೊಸ ವೃತ್ತಿ ಯಾವುದೆ ಎಂದರೆ ಸೊಳ್ಳೆಗಳ ಬೇಟೆ. ತಾವು ವಾಸವಿದ್ದ ಸ್ಥಳವನ್ನು ಸೊಳ್ಳೆಗಳಿಂದ ಮುಕ್ತವಾಗಿಸಲು ಹಲವು ಕ್ರಮಗಳನ್ನು ಅವರು ಮೊದಲು ಕೈಗೊಂಡರು.
ಅಲ್ಲಿಂದ ಶುರುವಾದ ಇವರ ಸೊಳ್ಳೆ ಬೇಟೆ ಈಗ ನಗರದ ಇತರೆ ಭಾಗಗಳಿಗೂ ಹರಡಿದೆ. ಬೆಳಿಗ್ಗೆ ವಾಕಿಂಗ್ ಹೋಗುವಾಗ ಇವರು ತಮ್ಮ ಜೊತೆ ಕೀಟನಾಶಕವನ್ನು ಕೊಂಡೊಯ್ಯುತ್ತಾರೆ.
ಜೇಕಬ್ ಬೇಟೆಗೆ ಇಳಿದ ದಿನದಿಂದ ಈವರೆಗೆ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗಿರುವುದಾಗಿ ಸ್ಥಳೀಯ ರಿಕ್ಷಾ ಡ್ರೈವರುಗಳು, ಅಂಗಡಿ ಮಾಲೀಕರು ಹೇಳಿದ್ದಾರೆ.
ಪ್ರತಿದಿನ ಜೇಕಬ್ ಕೀಟನಾಶಕ ಸಿಂಪಡಿಸುತ್ತಾ ಎರಡು ಗಂಟೆಗಳ ಕಾಲ ವಾಕ್ ಮಾಡುತ್ತಾರೆ. ಕೀಟನಾಶಕ ಸಿಂಪಡಕ ಉಪಕರಣ ಖರೀದಿಸಲು 4,000 ತಗುಲಿತ್ತು. ಈಗೀಗ ಕೀಟನಾಶಕ ಖರೀದಿಗೆ ಅಲ್ಲಿನ ನಿವಾಸಿಗಳೇ ಹಣಸಹಾಯ ಮಾಡುತ್ತಿದ್ದಾರೆ.
62ನೇ ಇಳಿ ವಯಸ್ಸಿನಲ್ಲೂ ಜೇಕಬ್ ಅವರ ಉತ್ಸಾಹ ಮತ್ತು ಸಮಾಜಬದ್ಧತೆ ಕಂಡು ಅಲ್ಲಿನ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.