ನವದೆಹಲಿ: ಕಳೆದ ವಾರ ಮಂಡನೆಯಾದ 2022-23ರ ಬಜೆಟ್ನಲ್ಲಿ ಘೋಷಿಸಲಾಗಿರುವ ಡಿಜಿಟಲ್ ಕರೆನ್ಸಿ ಮುಂದಿನ ವರ್ಷ ಆರಂಭದ ಹೊತ್ತಿಗೆ ಚಾಲನೆಗೆ ಬರಬಹುದು ಎಂದ ಉನ್ನತ ಮೂಲಗಳು ತಿಳಿಸಿವೆ. ಡಿಜಿಟಲ್ ಕರೆನ್ಸಿಯು ಫಿಯೆಟ್ ಕರೆನ್ಸಿಯಂತೆ ವಿಶಿಷ್ಟವಾದ ಸಂಖ್ಯೆಯನ್ನು ಒಳಗೊಂಡಿರಲಿದ್ದು, ಯೂನಿಟ್ ರೂಪದಲ್ಲಿ ಇದನ್ನು ವಿತರಿಸಲಾಗುತ್ತದೆ.
ಇದು ಕಾನೂನುಬದ್ಧವಾದ ಡಿಜಿಟಲ್ ರೂಪದ ನಗದು ಆಗಿರಲಿದೆ. ಇದೊಂದು ರೀತಿಯ ಶಾಸನಬದ್ಧ ಹಣ ಥೈಲಿ (ವ್ಯಾಲೆಟ್) ಆಗಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಇದನ್ನು ಆರ್ಬಿಐ ಬಳಕೆ ತರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಜಿಟಲ್ ರುಪೀ ಬ್ಲಾಕ್ಚೈನ್ ಅನ್ನು ಆರ್ಬಿಐ ಅಭಿವೃದ್ಧಿ ಪಡಿಸುತ್ತಿದ್ದು, ಇದರ ಮೂಲಕ ಪ್ರತಿಯೊಂದು ವಹಿವಾಟನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಆದರೆ, ಹಾಲಿ ಚಲಾವಣೆ ಯಲ್ಲಿರುವ ಖಾಸಗಿ ಕಂಪನಿಗಳು ಡಿಜಿಟಲ್ ಕರೆನ್ಸಿಯನ್ನು ಈ ರೀತಿ ಪರಿಶೀಲಿಸಲು ಆಗುವುದಿಲ್ಲ.
ಕ್ರಾಂತಿಕಾರಕ ಬದಲಾವಣೆ: ಖಾಸಗಿ ಕಂಪನಿಗಳು ಡಿಜಿಟಲ್ ಕರೆನ್ಸಿ ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ವಿವರಿಸಿದ ಅವರು, ಬಿಟ್ಕಾಯಿನ್ ರೂಪದ ಕರೆನ್ಸಿ ಹೊಂದಿರುವವರು ಅದನ್ನು ಖಾಸಗಿ ಕಂಪನಿಗಳಿಗೆ ಪಾವತಿಸುತ್ತಾರೆ. ಈ ಕಂಪನಿಗಳು ಅದನ್ನು ತನ್ನ ಗ್ರಾಹಕರು ಯಾರಿಗೆ ಇದನ್ನು ವರ್ಗಾವಣೆ ಮಾಡಬೇಕು ಎಂದು ಸೂಚಿಸಿರುತ್ತಾರೋ ಅವರಿಗೆ ವರ್ಗಾಯಿಸುತ್ತದೆ. ಹೀಗಾಗಿ ಇದು ಯಾರಿಂದ ಯಾರಿಗೆ ವರ್ಗಾವಣೆ ಆಯಿತು ಎಂಬುದರ ಜಾಡನ್ನು ಹಿಡಿಯಲಾಗದು ಎಂದಿದ್ದಾರೆ.
ಡಿಜಿಟಲ್ ಕರೆನ್ಸಿಯಲ್ಲಿ ಈಗ ಖಾಸಗಿ ಕಂಪನಿಗಳ ಬಿಟ್ ಕಾಯಿನ್ಗಳು ಚಲಾವಣೆಯಲ್ಲಿದ್ದು, ಇದು ಅನಿಯಂತ್ರಿತ ಆಗಿದೆ. ಹೀಗಾಗಿ ಸರ್ಕಾರವೇ ಕೇಂದ್ರೀಯ ಬ್ಯಾಂಕ್ ಮೂಲಕ ಅಧಿಕೃತವಾಗಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಚಲಾವಣೆಗೆ ತರಲಿದೆ ಎಂದು ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಕಾನೂನು ಬದ್ಧವಾದ ಈ ಡಿಜಿಟಲ್ ಕರೆನ್ಸಿಯು ಕ್ರಾಂತಿಕಾರಕ ಬದಲಾವಣೆಗೆ ತರಲಿದೆ. ಜತೆಗೆ ಬ್ಲಾಕ್ಚೈನ್ ಮತ್ತು ತಂತ್ರಜ್ಞಾನ ಆಧಾರಿತವಾದ ಇದು, ಕರೆನ್ಸಿ ನಿರ್ವಹಣಾ ವ್ಯವಸ್ಥೆಯ ಖರ್ಚನ್ನು ತಗ್ಗಿಸಲಿದೆ. ಇದರ ರೂಪರೇಷೆ, ಕಾನೂನು ಚೌಕಟ್ಟುಗಳು ಅಂತಿಮಗೊಳ್ಳಬೇಕಿದೆ ಎಂದು ನಿರ್ಮಲಾ ತಿಳಿಸಿದ್ದರು.