ನೋಯ್ಡ: ರೈತ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಕೇಂದ್ರ ಸರಕಾರ ದ್ರೋಹ ಎಸಗಿದೆ ಎಂದು ಪ್ರತಿಪಾದಿಸಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ದೀರ್ಘ ಹೋರಾಟಕ್ಕೆ ಸಿದ್ಧರಾಗಿ ಎಂದು ಸೋಮವಾರ ರೈತರಿಗೆ ಕರೆ ನೀಡಿದ್ದಾರೆ.
ನೋಯ್ಡ: ರೈತ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಕೇಂದ್ರ ಸರಕಾರ ದ್ರೋಹ ಎಸಗಿದೆ ಎಂದು ಪ್ರತಿಪಾದಿಸಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ದೀರ್ಘ ಹೋರಾಟಕ್ಕೆ ಸಿದ್ಧರಾಗಿ ಎಂದು ಸೋಮವಾರ ರೈತರಿಗೆ ಕರೆ ನೀಡಿದ್ದಾರೆ.
ರೈತ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರಿಗೆ ಪರಿಹಾರ ನೀಡದೇ ಇರುವುದು ಹಾಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಷಯ ಪರಿಶೀಲಿಸಲು ಸಮಿತಿ ರೂಪಿಸದೇ ಇರುವುದು ಯಾಕೆ ? ಎಂಬುದನ್ನು ವಿವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ''ದೇಶದ ರೈತರಿಗೆ ದ್ರೋಹ ಎಸಗುವ ಮೂಲಕ ಕೇಂದ್ರ ಸರಕಾರ ರೈತರ ಗಾಯಗಳ ಮೇಲೆ ಉಪ್ಪು ಲೇಪಿಸಿದೆ. ಈ ದ್ರೋಹದ ಹಿನ್ನೆಲೆಯಲ್ಲಿ ದೇಶದ ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಬೇಕು ಎಂಬುದು ಸ್ಪಷ್ಟ'' ಎಂದು ರಾಕೇಶ್ ಟಿಕಾಯತ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಬಿಕೆಯು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನೀಡಿದ ಕರೆಯಂತೆ ರೈತರ ಒಂದು ಗುಂಪು ಸೋಮವಾರ 'ದ್ರೋಹದ ದಿನ' ಆಚರಿಸುತ್ತಿರುವಂತೆ ರಾಕೇಶ್ ಟಿಕಾಯತ್ ಅವರ ಈ ಹೇಳಿಕೆ ಹೊರ ಬಿದ್ದಿದೆ. ''ಪ್ರತಿಭಟನೆ ಸಂದರ್ಭ ದಾಖಲಿಸಿದ ಪ್ರಕರಣಗಳನ್ನು ಹಿಂದೆ ತೆಗೆಯದೇ ಇರುವುದು, ಹುತಾತ್ಮರಿಗೆ ಪರಿಹಾರ ನೀಡದೇ ಇರುವುದು, ವಿದ್ಯುತ್ ಶುಲ್ಕದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು, ಕೇಂದ್ರ ತನಿಖಾ ಸಂಸ್ಥೆಗಳ ನೋಟಿಸ್ ಹಾಗೂ ಪ್ರಕರಣಗಳ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಇರುವುದು ರೈತರಿಗೆ ಮಾಡುವ ದ್ರೋಹ'' ಎಂದು ಇನ್ನೊಂದು ಟ್ವೀಟ್ನಲ್ಲಿ ಟಿಕಾಯತ್ ಹೇಳಿದ್ದಾರೆ. ಸಿಂಘು, ಟಿಕ್ರಿ ಹಾಗೂ ಗಾಝಿಪುರದ ಪ್ರಮುಖ ಗಡಿ ಭಾಗಗಳನ್ನು ಸುಮಾರು ಒಂದು ವರ್ಷಗಳಿಂದ ಆಕ್ರಮಿಸಿಕೊಂಡಿರುವ ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ಧ ಖಾತರಿ ನೀಡಬೇಕು ಎಂದು ಕೂಡ ಆಗ್ರಹಿಸಿದ್ದರು.