ಕಣ್ಣೂರು: ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಸ್ಥಾನದ ನೌಕರರು ವೇತನ ಮತ್ತು ಸೌಲಭ್ಯಗಳ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ವೇತನ ಪರಿಷ್ಕರಣೆ ಹಾಗೂ ಬಾಕಿ ವೇತನ ಜಾರಿ ಮಾಡುವ ಭರವಸೆಯನ್ನು ಸರಕಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ಸಂಕಷ್ಟದಲ್ಲಿದೆ.
ಮಲಬಾರ್ ದೇವಸ್ವಂ ಮಂಡಳಿಯು ಭಕ್ತರ ಭಾವನೆಗಳಿಗೆ ಮಣಿಯದೆ ಬಲವಂತವಾಗಿ ದೇವಾಲಯಗಳನ್ನು ವಶಪಡಿಸಿಕೊಳ್ಳಲು ತೋರುತ್ತಿರುವ ಉತ್ಸಾಹ ವೇತನ ನೀಡುವುದರಲ್ಲಿ ಏಕೆ ಇಲ್ಲ ಎಂದು ನೌಕರರು ಕೇಳುತ್ತಿದ್ದಾರೆ. ನೌಕರರು ಹೇಳುವಂತೆ ಒಂದು ತಿಂಗಳು ಕೆಲಸ ಮಾಡಿದರೆ ವಾರದ ಅಕ್ಕಿ ಕೊಳ್ಳಲೂ ಹಣ ಸಿಗುತ್ತಿಲ್ಲ.
ನೌಕರರು ನ್ಯಾಯಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ. ಕಳೆದ ವರ್ಷ ದೇವಾಲಯದ ನೌಕರರಿಗೆ ವೇತನ ಹೆಚ್ಚಳ, ಸಮಗ್ರ ಕಾನೂನು ತಿದ್ದುಪಡಿ ಮಸೂದೆ ಹಾಗೂ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಜಂಟಿ ಮುಷ್ಕರ ಸಮಿತಿ ಸತತ 64 ದಿನಗಳ ಕಾಲ ಮುಷ್ಕರ ನಡೆಸಿತ್ತು. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿತ್ತು. ಆದರೆ ಆ ಬಳಿಕ ಯಾವುದೇ ಕ್ರಮಕ್ಕೆ ಸರಕಾರ ಆಸಕ್ತಿವಹಿಸಿಲ್ಲ.
ಮಲಬಾರ್ ದೇವಸ್ವಂ ಬೋರ್ಡ್ ಅಸ್ತಿತ್ವಕ್ಕೆ ಬಂದಾಗ, ಕೊಚ್ಚಿ-ತಿರುವಾಂಕೂರು ದೇವಸ್ವಂ ಬೋರ್ಡ್‌ನಂತೆಯೇ ಸಾರ್ವಜನಿಕ ನಿಧಿ ಮತ್ತು ವೇತನ ಸುಧಾರಣೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಅಂತಹದೇನೂ ಆಗಲಿಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸಿ ಬೇಸತ್ತಿರುವ ಅವರು ಮುಂದೇನು ಮಾಡಬೇಕೆಂದು ತೋಚದೆ ಪರದಾಡುತ್ತಿದ್ದಾರೆ.