ಮುಂಬೈ: ಸಂಪೂರ್ಣ ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡುವ ಮಹಾರಾಷ್ಟ್ರ ಸರ್ಕಾರದ ಆದೇಶ "ಕಾನೂನುಬಾಹಿರ" ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ಸರ್ಕಾರದ ಆಗಿನ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರು ಸಹಿ ಮಾಡಿದ ಮೂರು ಆದೇಶಗಳು ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.
"ಮಾಜಿ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶಗಳು ನಿಗದಿತ ಕಾರ್ಯವಿಧಾನದ ಅಡಿಯಲ್ಲಿ ಬರುವುದಿಲ್ಲ. ಕಾನೂನುಬಾಹಿರ ಆದೇಶಗಳಿಂದ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ" ಎಂದು ಹೈಕೋರ್ಟ್ ಹೇಳಿದೆ.
ಮಂಗಳವಾರ, ಸರ್ಕಾರದ ಪರ ವಕೀಲ ಅನಿಲ್ ಅಂತೂರ್ಕರ್ ಅವರು ರಾಜ್ಯ ಸರ್ಕಾರ ಹೊರಡಿಸಿದ್ದ ಮೂರು ಆದೇಶಗಳನ್ನು (ಜುಲೈ 15, ಆಗಸ್ಟ್ 10 ಮತ್ತು ಆಗಸ್ಟ್ 11, 2021 ರಂದು ಹೊರಡಿಸಲಾಗಿತ್ತು) ಹಿಂತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
"ಹೈಕೋರ್ಟ್ ಪರಿಶೀಲನೆ ನಂತರ ಮೂರು ಆದೇಶಗಳನ್ನು ಹಿಂಪಡೆಯಲಾಗಿದೆ. ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿಯು ಫೆಬ್ರವರಿ 25 ರಂದು ಸಭೆ ನಡೆಸಲಿದ್ದು, ನಂತರ ಹೊಸ ನಿರ್ದೇಶನಗಳನ್ನು ನೀಡಲಾಗುತ್ತದೆ" ಎಂದು ಅಂತೂರ್ಕರ್ ಹೇಳಿದ್ದಾರೆ.