ರೂರ್ಕೆಲಾ: ಒಡಿಶಾದಲ್ಲಿ ಮೂರು ಹಂತದ ಪಂಚಾಯಿತಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಇಲ್ಲಿನ ಸುಂದರ್‌ಗಢ್ ಜಿಲ್ಲೆಯಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಗ್ರಾಮವೊಂದರಲ್ಲಿ ಗ್ರಾಮಸ್ಥರು ಎಲ್ಲ ಅಭ್ಯರ್ಥಿಗಳಿಗಾಗಿ ಮೌಖಿಕ ಮತ್ತು ಲಿಖಿತ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಿರುವ ಕುರಿತು ವರದಿಯಾಗಿದೆ.
ಕುತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಪದವು ಗ್ರಾಮಸ್ಥರು ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಿದ್ದು, ಫೆ. 18ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ 9 ಅಭ್ಯರ್ಥಿಗಳನ್ನು ಸ್ಥಳೀಯ ಶಾಲಾ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಗೆ ಆಹ್ವಾನಿಸಿ, ಅವರಿಗೆ ಪರೀಕ್ಷೆಯ ಬಗ್ಗೆ ತಿಳಿಸಲಾಯಿತು ಎಂದು ಸರ್‌ಪಂಚ್ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್‌ಪಂಚ್ ಹುದ್ದೆಗೆ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎಲ್ಲರೂ ಪ್ರವೇಶ ಪರೀಕ್ಷೆ ಹಾಜರಾಗಿದ್ದಾರೆ. ಪರೀಕ್ಷೆಯು ರಾತ್ರಿ 8ರವರೆಗೆ ನಡೆಯಿತು ಎಂದೂ ಅವರು ತಿಳಿಸಿದ್ದಾರೆ.
'ಚುನಾವಣೆಗೆ ಸ್ಪರ್ಧಿಸಲು ಕಾರಣಗಳೇನು?, ಅಭ್ಯರ್ಥಿಯಾಗಿ ನಿಮ್ಮ ಐದು ಗುರಿಗಳೇನು? ಪ್ರಸ್ತುತ ಯಾವ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಿರಿ? ಅದರ ವಿವರಗಳೇನು?, ಸ್ಪರ್ಧಿಸಲಿರುವ ಕ್ಷೇತ್ರದಲ್ಲಿನ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳು ಮತ್ತು ವಾರ್ಡ್‌ಗಳ ಮಾಹಿತಿಯ ಕುರಿತು ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು' ಎಂದು ಮತ್ತೊಬ್ಬ ಅಭ್ಯರ್ಥಿ ಮಾಹಿತಿ ನೀಡಿದ್ದಾನೆ.
ಪರೀಕ್ಷೆಯ ಫಲಿತಾಂಶವು ಫೆ. 17ರಂದು ಪ್ರಕಟವಾಗಲಿದೆ.
'ಗ್ರಾಮಸ್ಥರು ಆಯೋಜಿಸಿರುವ ಪ್ರವೇಶ ಪರೀಕ್ಷೆಯ ಕುರಿತು ಇದುವರೆಗೆ ನಮಗೆ ಯಾರೂ ಔಪಚಾರಿಕವಾಗಿ ದೂರು ನೀಡಿಲ್ಲ' ಎಂದು ಚುನಾವಣಾ ಅಧಿಕಾರಿ ರಬಿಂದ ಸೇಥಿ ತಿಳಿಸಿದ್ದಾರೆ.