HEALTH TIPS

ಕೋವಿಡ್ ಪರಿಹಾರ ಪಾವತಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶ

              ನವದೆಹಲಿ :ಕೋವಿಡ್ ನಿಂದ ಮೃತರ ಕುಟುಂಬಗಳಿಗೆ ಪರಿಹಾರ ಪಾವತಿಸುವಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಎಸ್‌ಎಲ್‌ಎಸ್‌ಎ)ದ ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯಕ್ಕಾಗಿ ಪೂರ್ಣಕಾಲಿಕ ನೋಡಲ್ ಅಧಿಕಾರಿಯನ್ನು ನೇಮಕಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿದೆ.

             ನೋಡಲ್ ಅಧಿಕಾರಿಯಾಗಿ ನೇಮಕಗೊಳ್ಳುವವರು ಮುಖ್ಯಮಂತ್ರಿಗಳ ಸಚಿವಾಲಯದ ಉಪ ಕಾರ್ಯದರ್ಶಿಗಿಂತ ಕೆಳಗಿನ ದರ್ಜೆಯವರಾಗಿರಬಾರದು ಎಂದು ಸ್ಪಷ್ಟಪಡಿಸಿದೆ.

ಇಂದಿನಿಂದ (ಶುಕ್ರವಾರ) ಒಂದು ತಿಂಗಳೊಳಗೆ ಕೋವಿಡ್ನಿಂದ ಮೃತಪಟ್ಟವರ ಹೆಸರು,ವಿಳಾಸ ಮತ್ತು ಮರಣ ಪ್ರಮಾಣಪತ್ರದಂತಹ ಸಂಪೂರ್ಣ ವಿವರಗಳನ್ನು ಹಾಗೂ ಇಂದಿನಿಂದ ಒಂದು ವಾರದೊಳಗೆ ಅನಾಥರಿಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಸಂಬಂಧಿಸಿದ ಎಸ್‌ಎಲ್‌ಎಸ್‌ಎಗೆ ನೀಡುವಂತೆಯೂ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ರಾಜ್ಯ ಸರಕಾರಗಳಿಗೆ ಸೂಚಿಸಿತು. ಇದಕ್ಕೆ ವಿಫಲಗೊಂಡಲ್ಲಿ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನೂ ಪೀಠವು ನೀಡಿತು.

             ಪರಿಹಾರ ಕೋರಿಕೆಯ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ನಿರಾಕರಿಸುವಂತಿಲ್ಲ ಎಂದು ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಯಾವುದೇ ತಾಂತ್ರಿಕ ಲೋಪ ಕಂಡುಬಂದರೆ ಸಂಬಂಧಿಸಿದ ರಾಜ್ಯಗಳು ಲೋಪಗಳನ್ನು ಸರಿಪಡಿಸಲು ಅರ್ಜಿದಾರರಿಗೆ ಅವಕಾಶ ನೀಡಬೇಕು ಎಂದು ತಿಳಿಸಿತು.

           ಹಕ್ಕು ಕೋರಿಕೆಯನ್ನು ಸಲ್ಲಿಸಿದ 10 ದಿನಗಳ ಗರಿಷ್ಠ ಅವಧಿಯೊಳಗೆ ಪರಿಹಾರವನ್ನು ಪಾವತಿಸಲು ರಾಜ್ಯಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ತಮ್ಮ ಪೋರ್ಟಲ್ಗಳಲ್ಲಿ ದಾಖಲಾಗಿರುವ ಕೋವಿಡ್ ಸಾವುಗಳು ಮತ್ತು ಪರಿಹಾರವನ್ನು ಪಾವತಿಸಬೇಕಿರುವ ವ್ಯಕ್ತಿಗಳ ಸಂಖ್ಯೆ ಕುರಿತು ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನಮ್ಮ ಹಿಂದಿನ ಆದೇಶದ ಹೊರತಾಗಿಯೂ ಹೆಚ್ಚಿನ ರಾಜ್ಯಗಳು ಕೇವಲ ಅಂಕಿಅಂಶಗಳನ್ನು ಮಾತ್ರ ಒದಗಿಸಿವೆ,ಸಂಪೂರ್ಣ ವಿವರಗಳನ್ನು ಸಲ್ಲಿಸಿಲ್ಲ ಎಂದು ತಿಳಿಸಿತು.

              ಸರಕಾರದ ಪೋರ್ಟಲ್ನಲ್ಲಿ ಸಾವುಗಳು ದಾಖಲಾಗಿದ್ದರೂ ಎಷ್ಟು ಕುಟುಂಬಗಳು ಇನ್ನೂ ಪರಿಹಾರಕ್ಕಾಗಿ ಸೂಕ್ತ ಪ್ರಾಧಿಕಾರಗಳನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಕಂಡುಕೊಳ್ಳುವುದು ನಮ್ಮ ಹಿಂದಿನ ಆದೇಶದ ಉದ್ದೇಶವಾಗಿತ್ತು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಕಾನೂನು ಸೇವೆಗಳ ಪ್ರಾಧಿಕಾರವು ಅಂತಹ ಕುಟುಂಬಗಳನ್ನು ಸಂಪರ್ಕಿಸಿ ಅವರು ಅರ್ಜಿಗಳನ್ನು ಸಲ್ಲಿಸುವಂತೆ ಮಾಡಬೇಕು ಮತ್ತು ಮಧ್ಯವರ್ತಿಯ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries