ನವದೆಹಲಿ: ನೀವು ಮಂಗಳ ಗ್ರಹದಲ್ಲಿ ಸಿಲುಕಿಕೊಂಡರೂ ಭಾರತೀಯ ರಾಯಭಾರ ಕಚೇರಿ ನಿಮ್ಮ ನೆರವಿಗೆ ಇರಲಿದೆ ಎಂಬುದಾಗಿ ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರವಾಗಿ ಅವರು ಈ ಸ್ಪಷ್ಟನೆ ನೀಡಿದರು.
ಸಮಸ್ಯೆಯಲ್ಲಿ ಸಿಲುಕಿದ ಯಾವುದೇ ಭಾರತೀಯನನ್ನು ಅಲ್ಲೇ ಉಳಿಯುವಂತೆ ಮಾಡುವುದಿಲ್ಲ. ಯುದ್ಧರಂಗದಲ್ಲಿ ಗಡಿಯ ಎರಡೂ ಭಾಗದಲ್ಲಿ ಕೆಲವು ನಿರ್ಬಂಧ, ಗೊಂದಲ, ಘರ್ಷಣೆ ಸಹಜ. ನೀವು ತಾಳ್ಮೆಯಿಂದ ಇರದಿದ್ದರೆ, ನಿಯಮಗಳನ್ನು ಪಾಲಿಸದಿದ್ದರೆ ಸಮಸ್ಯೆಳಾಗಬಹುದು ಎಂದು ಅವರು ಕಿವಿಮಾತು ಕೂಡ ಹೇಳಿದ್ದಾರೆ.
ನೀವು ಮಂಗಳ ಗ್ರಹದಲ್ಲಿ ಸಿಲುಕಿಕೊಂಡರೂ ಭಾರತೀಯ ರಾಯಭಾರ ನಿಮ್ಮ ನೆರವಿಗೆ ಬರಲಿದೆ ಎಂಬ ತತ್ವದ ಮೇಲೆ ಮೋದಿ ನೇತೃತ್ವದ ಸರ್ಕಾರ ನಡೆಯುತ್ತಿದೆ. ಪ್ರಧಾನಿ ದೂರದೃಷ್ಟಿಯಿಂದ ಯೋಚನೆ ಮಾಡಿದ್ದು, ಸಮಸ್ಯೆಯಲ್ಲಿ ಸಿಲುಕಿರುವ ಭಾರತೀಯರೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸಲು 4 ಸಚಿವರನ್ನು ಯೂಕ್ರೇನ್ನ ನೆರೆಹೊರೆಯ ದೇಶಗಳಿಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದೂ ಹೇಳಿದರು.