ತಿರುವನಂತಪುರ: ಕೇರಳದಲ್ಲಿ ನಡೆದಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರ ಹೊಸ ಪುಸ್ತಕದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿವಶಂಕರ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದ ಕುರಿತು ಉಲ್ಲೇಖಿಸಿದ್ದು, ಅದರಲ್ಲಿ ಸ್ವಪ್ನಾ ಸುರೇಶ್ ಅವರ ಬಗ್ಗೆಯೂ ಬರೆದಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಘೋಷಣೆಯಾದ ಬೆನ್ನಿಗೇ, ಸ್ವಪ್ನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಶಿವಶಂಕರ್ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಶೋಷಿಸಿದ್ದಾರೆ, ನನ್ನ ಜೀವನ ನಾಶ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2020 ರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ಬಂಧನಕ್ಕೊಳಗಾಗಿದ್ದ ಸ್ವಪ್ನಾ ಸುರೇಶ್, ಜಾಮೀನು ಪಡೆದು ಕೆಲವು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
'ಲಂಚವಾಗಿ ಪಡೆದ ಐಫೋನ್ ಅನ್ನು ಉಡುಗೊರೆಯಾಗಿ ನೀಡಿ ಸ್ವಪ್ನಾ ಅವರು ನನ್ನನ್ನು ವಂಚಿಸಿದ್ದರು' ಎಂಬ ಶಿವಶಂಕರ್ ಹೇಳಿಕೆಗೂ ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಹಿರಿಯ ಅಧಿಕಾರಿಯೊಬ್ಬರಿಂದ ಇಂಥ ಮಾತುಗಳನ್ನು ನಾನು ನಿರೀಕ್ಷಿಸಿರಲಿಲ್ಲ' ಎಂದು ಅವರು ಹೇಳಿದ್ದಾರೆ.
' ನಾನು ಈಗಾಗಲೇ ಬಲಿಪಶುವಾಗಿದ್ದೇನೆ. ಇಡೀ ಜಗತ್ತು ನಾನು ಕೆಟ್ಟ ಮಹಿಳೆ ಎಂದು ಹೇಳುತ್ತಿದೆ' ಎಂದು ಸ್ವಪ್ನಾ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪ್ರಕರಣದಲ್ಲಿ ಶಿವಶಂಕರ್ ಅವರದ್ದೇ ಪ್ರಧಾನ ಪಾತ್ರ ಎಂದೂ ಅವರು ಆರೋಪಿಸಿದ್ದಾರೆ.
ಐಎಎಸ್ ಅಧಿಕಾರಿ ಶಿವಶಂಕರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.