ನವದೆಹಲಿ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಜೋರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ.
ಪ್ರಸ್ತುತ ಪ್ರಕರಣವನ್ನ ಕರ್ನಾಟಕ ಹೈಕೋರ್ಟ್ ಪೀಠ ವಿಚಾರಣೆ ನಡೆಸುತ್ತಿದೆ. ಹೈಕೋರ್ಟ್ನ ವಿಸ್ತೃತ ಪೀಠ ವಿಚಾರಣೆ ನಡೆಸಿ ಆದೇಶ ನೀಡಲಿ. ಆದೇಶದ ಬಳಿಕವೂ ಅಗತ್ಯ ಬಿದ್ದರೆ, ಮುಂದೆ ನೋಡೋಣ. ಸದ್ಯ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದೆ ಎಂದು ವರದಿಗಳು ತಿಳಿಸಿವೆ.
ವಿವಾದ ಪ್ರಾರಂಭವಾಗಿದ್ದು ಹೇಗೆ?
ಕುಂದಾಪುರ ಕಾಲೇಜಿನ 28 ಮುಸ್ಲಿಂ ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸಿ ತರಗತಿಗೆ ಹಾಜರಾಗದಂತೆ ತಡೆಯಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಾಗಿದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದರು. ಈ ಹುಡುಗಿಯರು ಕಾಲೇಜು ಗೇಟ್ ಮುಂದೆ ಕುಳಿತು ಧರಣಿ ಆರಂಭಿಸಿದ್ದರು.
ಹುಡುಗಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಕೆಲವು ಹಿಂದೂ ಸಂಘಟನೆಗಳು ಕಾಲೇಜು ಕ್ಯಾಂಪಸ್‌ನಲ್ಲಿ ಕೇಸರಿ ಶಾಲುಗಳನ್ನು ಧರಿಸುವಂತೆ ಹುಡುಗರನ್ನು ಕೇಳಿಕೊಂಡವು. ಇದೇ ವೇಳೆ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಬುರ್ಖಾ, ಹಿಜಾಬ್ ಬೇಡುವವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿತ್ತು. ಹಿಜಾಬ್ ಧರಿಸಿ ಭಾರತವನ್ನು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಮಾಡುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ ಎಂದು ಆರೋಪಿಸಲಾಗಿತ್ತು.
ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ವಿಜಯಪುರ ಜಿಲ್ಲೆಯ ಎರಡು ಕಾಲೇಜುಗಳಿಗೆ ರಜೆ ನೀಡಲಾಯಿತು. ಶಾಂತೇಶ್ವರ ಪಿಯು ಕಾಲೇಜ್ ಹಾಗೂ ಜಿಆರ್‌ಬಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ದಿನ ರಜೆ ನೀಡಲಾಗಿತ್ತು. ಈ ಮಧ್ಯೆ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಾಲಕಿಯರಿಗೆ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಲಾಗಿತ್ತು. ಮತ್ತೊಂದೆಡೆ, ಕುಂದಾಪುರದ ಸರ್ಕಾರಿ ಪಿಯು ಕಾಲೇಜು ಸೋಮವಾರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಿದೆ, ಆದರೆ ಅವರು ಪ್ರತ್ಯೇಕ ತರಗತಿಯಲ್ಲಿ ಕುಳಿತುಕೊಳ್ಳುವ ನಿಯಮವನ್ನು ಸಹ ಜಾರಿಗೊಳಿಸಿದ್ದಾರೆ. ಈ ಹುಡುಗಿಯರು ಕಾಲೇಜು ಆರಂಭದಿಂದ ಕೊನೆಯವರೆಗೆ ಪ್ರತಿದಿನ ಕಾಲೇಜು ಗೇಟ್‌ನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು.