ತಿರುವನಂತಪುರ: ಕೇರಳದಂತೆ ಉತ್ತರ ಪ್ರದೇಶವಾದರೆ ಜನರ ಜೀವನ ಸುಧಾರಿಸುತ್ತದೆ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಯುಪಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಚಿನ್ನ ಕಳ್ಳಸಾಗಣೆ ಮಾಡಿಲ್ಲ ಎಂದು ಜಾಲತಾಣದಲ್ಲಿ ಕುಟುಕಿರುವರು. ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ಕೇರಳ ಅಥವಾ ಬಂಗಾಳವಾಗಲಿದೆ ಎಂದು ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಮುಖ್ಯಮಂತ್ರಿ, ಯುಪಿ ಕೇರಳವಾದರೆ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಟ್ವೀಟಿಸಿದ್ದರು.
ಫೇಸ್ ಬುಕ್ ಮೂಲಕ ಸುರೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಪ್ರಧಾನ ಕಾರ್ಯದರ್ಶಿ ಚಿನ್ನ ಕಳ್ಳಸಾಗಣೆಗಾಗಿ ಜೈಲಿಗೆ ಹೋಗಿಲ್ಲ. ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ. ಪಾಪ್ಯುಲರ್ ಫ್ರಂಟ್ ದಾಳಿಯಲ್ಲಿ ಒಬ್ಬ ವ್ಯಕ್ತಿಯೂ ಸತ್ತಿಲ್ಲ. ಯಾವುದೇ ರಾಜಕೀಯ ಹತ್ಯೆಯಾಗಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.
ಯೋಗಿ ಸರ್ಕಾರ ಎಲ್ಲಾ ಬಂಡುಕೋರರನ್ನು ಜೈಲಿಗೆ ಹಾಕಿತು. ಕೊರೋನಾ ದ್ಯೆನಂದಿನ ಪ್ರಕರಣ ಒಮ್ಮೆಯೂ ಇಪ್ಪತ್ತು ದಾಟಿಲ್ಲ. ಯಾವುದೇ ಕೊರೊನಾ ಸಾವನ್ನು ಮುಚ್ಚಿಟ್ಟಿಲ್ಲ. ಮುಖ್ಯಮಂತ್ರಿಯಾಗಲಿ, ಒಬ್ಬನೇ ಒಬ್ಬ ಸಚಿವರಾಗಲಿ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿಲ್ಲ ಎಂದು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.