ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ತಮ್ಮ ವಾಸ್ತವ್ಯ ಅನಿವಾರ್ಯವಲ್ಲದಿದ್ದರೆ ಪೂರ್ವ ಯುರೋಪಿಯನ್ ರಾಷ್ಟ್ರವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ.
ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ NATO ದೇಶಗಳು ಮತ್ತು ರಷ್ಯಾದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಂತರ ಭಾರತ ಈ ಸಲಹೆಯನ್ನು ನೀಡಿದೆ.
"ಉಕ್ರೇನ್‌ನಲ್ಲಿ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ದೃಷ್ಟಿಯಿಂದ, ಅಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದು ಪರಿಗಣಿಸಲ್ಪಟ್ಟಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ" ಎಂದು ರಾಯಭಾರ ಕಚೇರಿ ತಿಳಿಸಿದೆ.
ಲಭ್ಯವಿರುವ ವಾಣಿಜ್ಯ ವಿಮಾನಗಳು ಮತ್ತು ಉಕ್ರೇನ್‌ನಿಂದ "ಕ್ರಮಬದ್ಧ ಮತ್ತು ಸಮಯೋಚಿತ ನಿರ್ಗಮನಕ್ಕಾಗಿ" ಚಾರ್ಟರ್ ಫ್ಲೈಟ್‌ಗಳನ್ನು ಪಡೆಯಬಹುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.
2020 ರ ಅಧಿಕೃತ ದಾಖಲೆಯ ಪ್ರಕಾರ, ಉಕ್ರೇನ್ ಸಣ್ಣ ದೇಶವಾದರೂ ಹೆಚ್ಚು ಭಾರತೀಯ ಸಮುದಾಯವನ್ನು ಹೊಂದಿದ್ದು, ಈ ದೇಶದಲ್ಲಿ ಸುಮಾರು 18,000 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.