ಕಾಸರಗೋಡು: ಬಹುತೇಕ ಮಂದಿ ವಿವಾಹ ಪ್ರಕ್ರಿಯೆ ಬಗ್ಗೆ ಮಾಹಿತಿಯಿಲ್ಲದೆ ಮುಂದುವರಿಯುತ್ತಿರುವುದರಿಂದ ವೈವಾಹಿಕ ಸಂಬಂಧದಲ್ಲಿ ಬಿರುಕು, ವಿಚ್ಛೇದನ ಹೆಚ್ಚಾಗುತ್ತಿದ್ದು, ವಿವಾಹಪೂರ್ವ ಕೌನ್ಸೆಲಿಂಗ್ ಅನಿವಾರ್ಯವಾಗುತ್ತಿರುವುದಾಗಿ ಕೇರಳ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ನ್ಯಾಯಾಧೀಶ ಕೆ.ಟಿ ನಿಸಾರ್‍ಅಹಮ್ಮದ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಮಹಿಳಾ ಸಂರಕ್ಷಣಾ ಕಚೇರಿಗಳ ಜಂಟಿ ಆಶ್ರಯದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾದ ವಿವಾಹಪೂರ್ವ ಕೌನ್ಸೆಲಿಂಗ್ ಯೋಜನೆ ಉದ್ಘಾಟಿಸಿ ಮಾತನಾಡಿದರು. ಅಪರಿಚಿತ ಎರಡು ವ್ಯಕ್ತಿತ್ವ ಒಂದಾಗುವಾಗ ಕೆಲಸವೊಂದು ಸಮಸ್ಯೆಗಳು ತಲೆದೋರುವುದು ಸಹಜ. ಇದರ ಪರಿಹಾರಕ್ಕೆ ಕುಟುಂಬ ನ್ಯಾಯಾಲಯ ಸಹಕರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕುಟುಂಬ ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಹೆಚ್ಚಳದ ಸೂಚನೆಯಾಗಿದೆ. ವಿವಾಹಪೂರ್ವ ಕೌನ್ಸೆಲಿಂಗ್ ಯೋಜನೆ ಇಂತಹ ಸಮಸ್ಯೆಗಳಿಗೆ ಒಂದಷ್ಟು ಪರಿಹಾರಕ್ಕೆ ಕಾರಣವಾಗುವ ಸಾಧ್ಯತೆಯಿರುವುದಾಗಿ ತಿಳಿಸಿದರು. ಜಿಲ್ಲಾ ನ್ಯಾಯಾಧೀಶ ಜಿ. ಕೃಷ್ಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಮೆನ್ ಪ್ರೊಟೆಕ್ಷನ್ ಅಧಿಕಾರಿ ಎಂ. ಪಿ. ಸುನಿತಾ, ಜಿಲ್ಲಾ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ವಿ.ಎಸ್. ಶಿಮ್ನಾ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಸಹಾಯಕ ಅಧಿಕಾರಿ ಮೋಹನ್‍ದಾಸ್ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ, ಸಬ್ ಜಡ್ಜ್ ಎಂ. ಸುಹೈಬ್ ಸ್ವಾಗತಿಸಿದರು. ಕೆ. ದಿನೇಶ್ ವಂದಿಸಿದರು.