ನವದೆಹಲಿ: ಕೋವಿಡ್ ವಿರುದ್ಧ ಪರಿಣಾಮಕಾರಿ ಲಸಿಕೆ ನೀಡುವ ಉದ್ದೇಶದಿಂದ ಕೊವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ನಾಸಿಕ ಲಸಿಕೆಯ ಮಿಶ್ರಣವನ್ನು ಬೂಸ್ಟರ್ ಲಸಿಕೆಯಾಗಿ ಪರೀಕ್ಷಿಸಲು ಭಾರತ್ ಬಯೋಟೆಕ್ ಕಂಪನಿ ನಿರ್ಧರಿಸಿದೆ. 800ಕ್ಕೂ ಅಧಿಕ ಜನರ ಮೇಲೆ ಐದು ರೀತಿಗಳಲ್ಲಿ ಈ ಬೂಸ್ಟರ್ ಡೋಸ್ ಪರೀಕ್ಷಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.
ಮೂರು ವ್ಯಾಕ್ಸಿನ್ಗಳ ಸಂಯೋಜನೆಯಿಂದ ರೋಗನಿರೋಧಕಶಕ್ತಿಯ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದನ್ನು ದೇಶದ ವಿವಿಧ ಭಾಗಗಳಲ್ಲಿರುವ ಒಂಬತ್ತು ಕೇಂದ್ರಗಳಲ್ಲಿ ಭಾರತ್ ಬಯೋಟೆಕ್ ಪರೀಕ್ಷೆ ನಡೆಸಲಿದೆ. ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ಸೆರಂನ ಕೋವಿಶೀಲ್ಡ್ ಈಗಾಗಲೇ ದೇಶದ ಲಸಿಕೆ ಅಭಿಯಾನದಲ್ಲಿ ಬಳಕೆಯಾಗುತ್ತಿದೆ. ಬಿಬಿವಿ154 ಬಯೋಟೆಕ್ ಅಭಿವೃದ್ಧಿಪಡಿಸಿರುವ ನಾಸಿಕ ಲಸಿಕೆಯಾಗಿದ್ದು ಸೂಜಿರಹಿತವಾಗಿ ನೀಡಬಹುದಾಗಿದೆ. ಅದು ನವೀನ ಅಡೆನೊವೈರಸ್ ವೆಕ್ಟರ್ ್ಡ ವ್ಯಾಕ್ಸಿನ್ ಆಗಿದ್ದು ಕೋವಿಡ್ ಸೋಂಕನ್ನು ಕೂಡ ತಡೆಯಬಲ್ಲದು ಎಂದು ಹೇಳಲಾಗಿದೆ.
74 ಕೋಟಿ ಟೆಸ್ಟ್ಗೆ 74 ಸಾವಿರ ಕೋಟಿ ರೂ. ವೆಚ್ಚ!: ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 74 ಕೋಟಿ ಕೋವಿಡ್ ಪರೀಕ್ಷೆ ನಡೆಸಲು 74 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಸಂಶಯಾಸ್ಪದವಾದ ಪ್ರಯೋಗಾಲಯ ಗಳಿಂದಾಗಿ ದೇಶದ ಬೊಕ್ಕಸಕ್ಕೆ ಇಷ್ಟೊಂದು ಅಗಾಧ ಮೊತ್ತದ ವೆಚ್ಚವಾಗಿದೆ. ದೇಶವ್ಯಾಪಿಯಾಗಿ ನಡೆದಿರುವ ಈ ಹಗರಣವನ್ನು ಗಮನಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ನಾಗಪುರದ ಸ್ವಯಂಸೇವಾ ಸಂಸ್ಥೆ ಗ್ರಾಹಕ್ ಭಾರತಿ, ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿ (ಪಿಐಎಲ್) ಸಲ್ಲಿಸಲು ಮುಂದಾಗಿದೆ. ಅಂತಿಮವಾಗಿ 4.20 ಕೋಟಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭಾರತದ ನಾಗರಿಕರು ಒಟ್ಟು 3,255 ಪ್ರಯೋಗಾಲಯಗಳಲ್ಲಿ ಆರ್ಟಿಪಿಸಿಆರ್, ಆರ್ಎಟಿ, ತ್ರೂಎನ್ಎಟಿ, ಸಿಬಿಎನ್ಎಎಟಿ ಪರೀಕ್ಷೆ ನಡೆಸಿಕೊಂಡಿದ್ದಾರೆ. ಆ ಪೈಕಿ 1,844 ಖಾಸಗಿ ಹಾಗೂ 1,411 ಸರ್ಕಾರಿ ಲ್ಯಾಬ್ಗಳಿವೆ ಎಂದು ಗ್ರಾಹಕ್ ಭಾರತಿ ಹೇಳಿದೆ.
ರೆಡ್ಡೀಸ್ ಲ್ಯಾಬ್ನಿಂದ ಬೂಸ್ಟರ್ಗೆ ಪ್ರಸ್ತಾವನೆ: ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಸುವುದಕ್ಕೆ ಸಂಬಂಧಿಸಿ ಭಾರತೀಯ ಔಷಧ ಮಹಾ ನಿಯಂತ್ರಕರಿಗೆ (ಡಿಸಿಜಿಐ) ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಪ್ರಸ್ತಾಪನೆಯೊಂದನ್ನು ಸಲ್ಲಿಸಿದೆ. ಸ್ಪುಟ್ನಿಕ್ ಲಸಿಕೆಯ ಕ್ಲಿನಿಕಲ್ ಪರೀಕ್ಷೆ ಮತ್ತು ಭಾರತದಲ್ಲಿ ಅದರ ಉತ್ಪಾದನೆಗಾಗಿ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ನೊಂದಿಗೆ ರೆಡ್ಡೀಸ್ ಲ್ಯಾಬ್ ಒಡಂಬಡಿಕೆ ಮಾಡಿಕೊಂಡಿದೆ. ತುರ್ತು ಸಂದರ್ಭದಲ್ಲಿ ಸೀಮಿತ ಬಳಕೆಗಾಗಿ ಸ್ಪುಟ್ನಿಕೆ ಲಸಿಕೆ ಆಮದು ಮಾಡಿಕೊಳ್ಳಲು ಡಿಸಿಜಿಐ ಕಳೆದ ವರ್ಷ ಏಪ್ರಿಲ್ನಲ್ಲಿ ಅನುಮತಿ ನೀಡಿತ್ತು.
ಕೆನಡಾದಲ್ಲಿ ಕರೊನಾ ವಿರೋಧಿ ಕಾವು: ಲಸಿಕೆ ಕಡ್ಡಾಯ ಹಾಗೂ ಇತರ ಕರೊನಾ ನಿಯಂತ್ರಣ ನಿಯಮಗಳ ವಿರುದ್ಧ ಕೆನಡಾದಲ್ಲಿ ಪ್ರತಿರೋಧದ ಕಾವು ಏರುತ್ತಿದೆ. ರಾಜಧಾನಿ ಒಟ್ಟಾವದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಶನಿವಾರ ದೇಶದ ಹಲವು ನಗರಗಳಲ್ಲಿ ಪ್ರತಿಭಟನಾ ರ್ಯಾಲಿಗಳು ನಡೆದವು.
ಭಾರತದಲ್ಲಿ ಕೇಸ್ ಇಳಿಕೆ: ಭಾರತದಲ್ಲಿ ಕರೊನಾ ಸೋಂಕು ಇಳಿಮುಖವಾಗುತ್ತಿದ್ದು ಭಾನುವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 1,07,474 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಇದರೊಂದಿಗೆ ದೇಶದ ಕರೊನಾ ಸೋಂಕಿತರ ಸಂಖ್ಯೆ 4,21,88,138ಕ್ಕೆ ಏರಿದೆ. 865 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 5,01,979ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,25,011ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೇತರಿಕೆ ದರ ಶೇಕಡ 95.91 ಆಗಿದೆ.