ಬಾರಾಬಂಕಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಯೋಜನೆಯ ಪ್ರಯೋಜನಗಳನ್ನು ಎಲ್ಲಾ ಜನರು ಪಡೆದುಕೊಂಡಿದ್ದಾರೆ. ವಿಶೇಷವಾಗಿ ದಲಿತ ಮಹಿಳೆಯರು, ಮುಸ್ಲಿಂ ಸಹೋದರಿಯರು ಪಡೆದಿದ್ದಾರೆ. ತ್ರಿವಳಿ ತಲಾಖ್ ರದ್ಧತಿ ದೊಡ್ಡ ಪ್ರಮಾಣದ ಮುಸ್ಲಿಂ ಮಹಿಳೆಯರಿಗೆ ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ವೈವಿದ್ಯತೆಯ ಕಾರ್ಡ್ ಬಳಸಿದ ಮೋದಿ, ಮುಸ್ಲಿಂ ಕುಟುಂಬದ ಸದಸ್ಯನಾಗದಿದ್ದರೂ ಮುಸ್ಲಿಂ ಮಹಿಳೆಯರಂತೆ ನೋವು ಅನುಭವಿಸಿದ್ದೇವೆ. ತ್ರಿವಳಿ ತಲಾಖ್ ಮಹಿಳೆಯರಿಗೆ ಮಾತ್ರ ಭದ್ರತೆ ಒದಗಿಸುತ್ತಿಲ್ಲ, ಅವರ ತಂದೆ, ಸಹೋದರರಿಗೂ ಮಾನಸಿಕ ಶಾಂತಿ ಒದಗಿಸಿದೆ.
ಕುಟುಂಬ ರಾಜಕಾರಣದ ಪಕ್ಷಕ್ಕೆ ಬಡವರು ಮೂಲಸೌಕರ್ಯ ಪಡೆಯುವುದು ಬೇಡ, ಬದಲಿಗೆ ಅವರ ಒಳಿತಿಗಾಗಿ ಜನರನ್ನು ಬಳಸಿಕೊಳ್ಳುತ್ತಾ ಶ್ರೀಮಂತರಾಗುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳು ಅಭೂತಪೂರ್ವಕವಾಗಿವೆ. ಉತ್ತರ ಪ್ರದೇಶದಲ್ಲಿ ಯಾರಾದರೂ ಸರ್ಕಾರ ರಚಿಸಬೇಕಾದಲ್ಲಿ ಅದು ಬಿಜೆಪಿ ಮಾತ್ರ, ಮುಖ್ಯಮಂತ್ರಿಯಾಗಬೇಕಿದ್ದಲ್ಲಿ ಅದು ಯೋಗಿ ಆದಿತ್ಯನಾಥ್ ಮಾತ್ರ ಎಂದು ಅವರು ಹೇಳಿದರು.
ಮೂಲಸೌಕರ್ಯ ಸಮಸ್ಯೆ ಯಥೇಚ್ಚವಾಗಿದ್ದ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ವಾತಾವರಣ ಸೃಷ್ಟಿಸಿದ್ದೇವೆ. ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬಿಜೆಪಿ ಸಣ್ಣ ರೈತರಿಗಾಗಿ ಹೋರಾಟ ನಡೆಸುತ್ತದೆ. ಇದವ್ವು ಯಾವುದೇ ರಾಜಕೀಯ ಪಕ್ಷ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಮಧ್ಯೆ ಉತ್ತರ ಪ್ರದೇಶದ 9 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಬುಧವಾರ ಪ್ರಗತಿಯಲ್ಲಿದ್ದು, ಮಧ್ಯಾಹ್ನ 1 ಗಂಟೆಯವರೆಗೂ ಶೇ. 37. 45 ರಷ್ಟು ಮತದಾನವಾಗಿದೆ.