ನವದೆಹಲಿ: ಪ್ರಧಾನಿ ಮೋದಿ ಹಾಸ್ಯ ಚಟಾಕಿ ಹಾರಿಸುವುದರಲ್ಲಿ ನಿಸ್ಸೀಮರು. ಪ್ರತಿಪಕ್ಷ ನಾಯಕರಿರಲಿ.. ಸದಸ್ಯರಿರಲಿ ಯಾರೂ ಸಹ ಅವರಿಂದ ತಮಾಷೆಗೆ ಗುರಿಯಾಗುವುದರಿಂದ ಬಚಾವ್ ಆಗಲು ಸಾಧ್ಯವಿಲ್ಲ. ನಿನ್ನಯೊ ಸಹ ಇದೆ ರೀತಿಯ ಪ್ರಸಂಗವೊಂದು ನಡೆದಿದೆ.
ಅದೇನೆಂದರೆ, ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಿದ ಮೇಲೆ ಲೋಕಸಭೆ ಕಲಾಪವನ್ನು ಮುಂದೂಡಲಾಯಿತು. ಇದೇ ವೇಳೆ ಪ್ರಧಾನಿ ಮೋದಿ ಪ್ರತಿಪಕ್ಷಗಳ ಸಂಸದರನ್ನು ಭೇಟಿ ಮಾಡಿ ಮಾತುಕತೆಗೆ ಮುಂದಾದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಟಿಎಂಸಿ ಸಂಸದ ಸೌಗತ್ ರಾಯ್ ಮಧ್ಯೆ ತಮಾಷೆಯ ಸಂಭಾಷಣೆ ನಡೆದಿದೆ.
ಲೋಕಸಭೆಯಲ್ಲಿ ಸಂಸದ ಅಧೀರ್ ರಂಜನ್ ಚೌಧರಿ ಅವರ ಪೀಠದಿಂದ ವಾಪಸ್ ಆದಾಗ ಟಿಎಂಸಿ ಸಂಸದ ಸೌಗತ ರಾಯ್ ಅವರು ಪ್ರಧಾನಿ ಮೋದಿಗೆ ಅಡ್ಡಿಪಡಿಸಿ, ದಯವಿಟ್ಟು ಬಂಗಾಳದ ರಾಜ್ಯಪಾಲರನ್ನು ತೆಗೆದುಹಾಕಿ. ರಾಜ್ಯ ಸರ್ಕಾರಕ್ಕೆ ತುಂಬಾ ತೊಂದರೆ ಕೊಡುತ್ತಿದ್ದಾರೆ” ಎಂದರು. ಇದಕ್ಕೆ ಪ್ರಧಾನಿ ಮೋದಿ ತಮಾಷೆಯ ಉತ್ತರ ನೀಡಿದ್ದು, “ನೀವು ನಿವೃತ್ತಿಯ ಘೋಷಣೆ ಮಾಡಿ, ಬಳಿಕ ನೋಡೋಣ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌಗತ್ ರಾಯ್, ಪ್ರಧಾನಿ ಅವರು ನನ್ನನ್ನು ಏಕೆ ನಿವೃತ್ತಿಗೊಳಿಸಬೇಕೆಂದು ಬಯಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಇದರ ಬಗ್ಗೆ ಚಿಂತಿಸಬೇಕಿದೆ ಎಂದ ಸೌಗತ ರಾಯ್, ನಾನು ನಿವೃತ್ತಿಯಾದ ಬಳಿಕ ಪ್ರಧಾನಿ ತನ್ನನ್ನು ರಾಜ್ಯಪಾಲರನ್ನಾಗಿ ಮಾಡುವ ಯೋಚನೆ ಇದ್ದರೂ ಇರಬಹುದು ಎಂದು ಹೇಳಿದರು.
ಸದ್ಯ ಜಗದೀಪ್ ಧಂಖರ್ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾರೆ. ಅವರು ಎಲ್ಲಾ ವಿಷಯಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯಪಾಲರ ಕೆಂಗಣ್ಣಿಗೆ ಗುರಿಯಾಗಿದ್ದು, ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ಜಗದೀಪ್ ಧಂಕರ್ ಅವರನ್ನು ಮಮತಾ ಬ್ಯಾನರ್ಜಿ ಬ್ಲಾಕ್ ಮಾಡಿದ್ದರು.