ನವದೆಹಲಿ: ಚುನಾವಣಾ ಪ್ರಣಾಳಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಪಕ್ಷಗಳನ್ನು ಉತ್ತರದಾಯಿ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ಕ್ರಮ ಕೈಗೊಂಡಿಲ್ಲ.
ಹಾಗಾಗಿ, ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪಕ್ಷವು ಈಡೇರಿಸದೇ ಇದ್ದರೆ ಪಕ್ಷದ ಚಿಹ್ನೆ ಮತ್ತು ನೋಂದಣಿ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಪ್ರಣಾಳಿಕೆ ಎಂದರೆ ಪಕ್ಷವು ಆಯ್ಕೆಯಾದರೆ ಏನು ಮಾಡಲಿದೆ ಎಂಬುದನ್ನು ವಿವರಿಸುವ ದಾಖಲೆ. ಪಕ್ಷದ ಉದ್ದೇಶ ಏನು ಎಂಬುದರ ಘೋಷಣೆ. ಯಾವುದೇ ಪಕ್ಷವು ಉತ್ಪ್ರೇಕ್ಷಿತ ಭರವಸೆಗಳನ್ನು ನೀಡಬಾರದು. ಇಂತಹ ಭರವಸೆಗಳು ಸರ್ಕಾರದ ಬೊಕ್ಕಸದ ಮೇಲೆ ಭಾರಿ ಒತ್ತಡ ಸೃಷ್ಟಿಸಬಹುದು. ಹಾಗಾಗಿ, ಪ್ರಣಾಳಿಕೆ ನಿಯಂತ್ರಣಕ್ಕೆ ಆಯೋಗಕ್ಕೆ ಮಾರ್ಗಸೂಚಿ ಸೃಷ್ಟಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.
ಜನಲೋಕಪಾಲ ಮಸೂದೆ-ಸ್ವರಾಜ್ ಮಸೂದೆಯನ್ನು ಜಾರಿಗೆ ತರುವುದಾಗಿ ಎಎಪಿಯು 2013, 2015 ಮತ್ತು 2020ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.
ಆದರೆ, ಈವರೆಗೆ ಈ ಭರವಸೆಯನ್ನು ಈಡೇರಿಸಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆಯನ್ನು ಬಿಜೆಪಿ ಯಾವಾಗಲೂ ನೀಡುತ್ತದೆ. ಅದು ಈವರೆಗೆ ಜಾರಿಗೆ ಬಂದಿಲ್ಲ ಎಂಬುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.