ಕೀವ್: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ತೀವ್ರಗೊಳ್ಳುತ್ತಿದ್ದು, ಇದೀಗ ಅಮೆರಿಕಾ ನೀಡಿರುವ ಆಫರ್ ಅನ್ನೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ತಿರಸ್ಕರಿಸಿದ್ದಾರೆ.
ಸೆಂಟ್ರಲ್ ಕೀವ್‌ನಿಂದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ನನಗೆ ಸ್ಥಳಾಂತರ ಬೇಡ. ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಕೀವ್ ತೊರೆಯುವಂತೆ ಅಮೆರಿಕಾ ನೀಡಿದ್ದ ಸಲಹೆಯನ್ನು ಝೆಲೆನ್‍ಸ್ಕಿ ತಿರಸ್ಕರಿಸಿದ್ದಾರೆ.
ಸೇನಾ ಸಮವಸ್ತ್ರವನ್ನು ಹೋಲುವ ಆಲಿವ್ ಗ್ರೀನ್ ಬಣ್ಣದ ಉಡುಪುನ್ನು ಧರಿಸಿ ಪ್ರಧಾನ ಮಂತ್ರಿ, ಸಿಬ್ಬಂದಿ ಮುಖ್ಯಸ್ಥ ಮತ್ತು ಇತರ ಹಿರಿಯ ಸಹಾಯಕರೊಂದಿಗೆ ನಿಂತಿದ್ದ ಝೆಲೆನ್‌ಸ್ಕಿ ಈ ಪ್ರತಿಕ್ರಿಯೆ ನೀಡಿರುವುದು ಕಂಡುಬಂದಿದೆ.
ನಾವೆಲ್ಲರೂ ಇಲ್ಲಿದ್ದೇವೆ. ನಮ್ಮ ಮಿಲಿಟರಿ ಇಲ್ಲಿದೆ. ನಾಗರಿಕರು ಇಲ್ಲಿದ್ದಾರೆ. ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು, ನಮ್ಮ ದೇಶವನ್ನು ರಕ್ಷಿಸುತ್ತಿದ್ದೇವೆ ಮತ್ತು ಅದು ಹೀಗೆಯೇ ಇರುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈ ಹಿಂದೆ ಟ್ವೀಟ್ ಮಾಡಿದ್ದ ಝೆಲೆನ್‍ಸ್ಕಿ ಅವರು, ರಷ್ಯಾದ ಪಡೆಗಳು ರಾತ್ರಿ ಸಮಯದಲ್ಲಿ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ನಾನು ಬಹಿರಂಗವಾಗಿ ಹೇಳಬೇಕಾಗಿದೆ. ಈ ರಾತ್ರಿ, ಹಗಲಿಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ನಮ್ಮ ರಾಜ್ಯದ ಅನೇಕ ನಗರಗಳು ದಾಳಿಗೆ ಒಳಗಾಗಿವೆ ಎಂದಿದ್ದರು.
ರಾಜಧಾನಿ ಕೀವ್‌ನಲ್ಲಿ ರಷ್ಯಾ ಹಾಗೂ ಉಕ್ರೇನ್ ಪಡೆಗಳು ಘರ್ಷಣೆ ನಡೆಸುತ್ತಿವೆ. ರಷ್ಯಾ ಸೇನೆ ಕೀವ್ ನಗರವನ್ನು ಸುತ್ತುವರಿದಿದ್ದು, ವೈಮಾನಿಕ ದಾಳಿಯಾಗುವ ಆತಂಕ ಎದುರಾಗಿದೆ. ಉಕ್ರೇನ್ ನಾಯಕತ್ವವನ್ನು ಪದಚ್ಯುತಗೊಳಿಸುವಂತೆ ಅಲ್ಲಿನ ಸೇನೆಗೆ ಪುಟಿನ್ ಕರೆ ಕೊಟ್ಟಿದ್ದಾರೆ. ಉಕ್ರೇನ್ ನಾಯಕತ್ವವನ್ನು ‘ಭಯೋತ್ಪಾದಕರು, ಡ್ರಗ್ ವ್ಯಸನಿಗಳು ಮತ್ತು ನವ ನಾಜಿಗಳು’ ಎಂದು ಕರೆದಿದ್ದಾರೆ.