ನವದೆಹಲಿ: ಹ್ಯುಂಡೈ ಪಾಕಿಸ್ತಾನ ಕಾಶ್ಮೀರ ಒಗ್ಗಟ್ಟಿನ ದಿನಕ್ಕೆ ಬೆಂಬಲಿಸಿದ್ದ ವಿಷಯವಾಗಿ ದಕ್ಷಿಣ ಕೊರಿಯಾದ ರಾಯಭಾರಿಯನ್ನು ಭಾರತ ಕರೆಸಿಕೊಂಡು ತನ್ನ ನಿಲುವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದೆ.
ಈ ವಿಷಯ ಪ್ರಾದೇಶಿಕ ಸಮಗ್ರತೆ ವಿಷಯವಾಗಿದ್ದು ಇದರಲ್ಲಿ ರಾಜಿ ಇಲ್ಲ ಎಂದು ದಕ್ಷಿಣ ಕೊರಿಯಾದ ರಾಯಭಾರಿಗೆ ಭಾರತ ತಿಳಿಸಿದೆ. ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ್ ಯಿ-ಯೋಂಗ್ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ್ದು ಹ್ಯುಂಡೈ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಪೋಸ್ಟ್ ನಿಂದಾಗಿ ಭಾರತದ ಜನತೆ ಹಾಗೂ ಸರ್ಕಾರಕ್ಕೆ ಉಂಟಾದ ಅಪಚಾರಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಾಚಿ ಕಠಿಣ ಸಂದೇಶ ರವಾನೆ ಮಾಡಿದ್ದು, ದಕ್ಷಿಣ ಕೊರಿಯಾದ ರಾಯಭಾರಿಯನ್ನು ಕರೆಸಿ "ತೀವ್ರ ಅಸಮಾಧಾನ"ವನ್ನು ವ್ಯಕ್ತಪಡಿಸಲಾಗಿದೆ ಎಂದು ಹೇಳಿದ್ದಾರೆ. ಹ್ಯುಂಡೈ ಸಂಸ್ಥೆ ಈ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾರತ ನಿರೀಕ್ಷಿಸುತ್ತದೆ. ಸಿಯೋಲ್ ಮೂಲದ ಸಂಸ್ಥೆ ಹ್ಯುಂಡೈ ನ್ನು ಸಂಪರ್ಕಿಸಿದ್ದು, ವಿವರಣೆಯನ್ನು ಕೇಳಲಾಗಿದೆ ಎಂದು ಬಗಾಚಿ ತಿಳಿಸಿದ್ದಾರೆ.