ನವದೆಹಲಿ: ಕವಿ ಮತ್ತು ಸಂತ ರವಿದಾಸ ಜಯಂತಿ ಪ್ರಯುಕ್ತ ಉತ್ತರ ಪ್ರದೇಶದ ವಾರಾಣಸಿಯ ದೇವಾಲಯದಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಕ್ತಾದಿಗಳಿಗೆ ಭೋಜನ (ಲಂಗರ್) ಬಡಿಸಿದರು.
ಉತ್ತರ ಪ್ರದೇಶ ಚುನಾವಣೆಯ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯು ಗುರು ರವಿದಾಸ ಅವರ ಚಿತ್ರವನ್ನು ನೀಡಿತು.
ಜಾತಿ ಮತ್ತು ಲಿಂಗದ ಆಧಾರದ ಮೇಲೆ ಸಮಾಜದಲ್ಲಿ ವರ್ಗೀಕರಣ ಮಾಡುವುದು, ಅಸಮಾನತೆ ತರುವುದನ್ನು ಸಂತ ರವಿದಾಸ ವಿರೋಧಿಸಿದ್ದರು. ಎಲ್ಲರಿಗೂ ಸಮಾನತೆ ಮತ್ತು ಗೌರವ ಸಿಗಬೇಕೆಂದು ಆಶಿಸಿದ್ದರು.
ಇವತ್ತು ಬೆಳಿಗ್ಗೆ ದೆಹಲಿಯ ಕರೋಲ್ ಬಾಗ್‌ನ ಗುರು ರವಿದಾಸ ವಿಶ್ರಮ ಧಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದ್ದರು. ಭಕ್ತರೊಂದಿಗೆ ಮಾತುಕತೆ ನಡೆಸಿದ್ದ ಅವರು ಕೀರ್ತನೆ ಗಾಯನದಲ್ಲಿ ಭಾಗಿಯಾಗಿದ್ದರು. ನಮ್ಮ ಸರ್ಕಾರವು ಪ್ರತಿಯೊಂದು ಹಂತದಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಗುರು ರವಿದಾಸರ ದೃಷ್ಟಿಯು ಅಡಕವಾಗಿದೆ ಎಂದು ಪ್ರಧಾನಿ ಹೇಳಿದರು.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಪ್ರಚಾರ ಕಾರ್ಯಗಳ ನಡುವೆಯೇ ಉತ್ತರ ಪ್ರದೇಶದ ಸೀರ್ ಗೋವರ್ಧನಪುರದ ಮಂದಿರಕ್ಕೆ ಬೆಳಗ್ಗಿನ ಜಾವ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
ಗುರು ರವಿದಾಸ ಜಯಂತಿಯ ಕಾರಣದಿಂದಾಗಿಯೇ ಚುನಾವಣಾ ಆಯೋಗವು ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಮುಂದೂಡಿತ್ತು. ಮೊದಲು ಫೆಬ್ರುವರಿ 14ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಫೆಬ್ರುವರಿ 20ಕ್ಕೆ ನಿಗದಿ ಮಾಡಿದೆ.