ನವದೆಹಲಿ: ಮುಂದಿನ ವಾರ ಫೆಬ್ರವರಿ 22, 24 ಮತ್ತು 26 ರಂದು ಭಾರತ- ಉಕ್ರೇನ್ ನಡುವೆ ಏರ್ ಇಂಡಿಯಾದ ಮೂರು ವಿಮಾನಗಳು ಹಾರಾಟ ನಡೆಸಲಿವೆ.
ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆಗಲಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಬುಕಿಂಗ್ ಆರಂಭವಾಗಿದೆ ಎಂದು ಏರ್ ಇಂಡಿಯಾ ಶುಕ್ರವಾರ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.
ಇದಕ್ಕೂ ಮೊದಲು, ಉಳಿಯಲು ಅನಿವಾರ್ಯವಲ್ಲದ ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಕೈವ್‌ನಿಂದ ಹೊರಹೋಗುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೇಳಿಕೊಂಡಿತು. ತಮ್ಮ ಉಪಸ್ಥಿತಿ ಕುರಿತು ಮಾಹಿತಿ ನೀಡಿದರೆ ರಾಯಭಾರಿ ಸಿಬ್ಬಂದಿ ಅಲ್ಲಿಗೆ ತೆರಳಲು ಸಾಧ್ಯವಾಗಲಿದ್ದು, ಮಾಹಿತಿ ನೀಡುವಂತೆ ಮಂಗಳವಾರ ಸಲಹೆ ನೀಡಿತ್ತು.
ರಷ್ಯಾ- ಉಕ್ರೇನ್ ಗಡಿಯಲ್ಲಿ ಅಪಾರ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಲಾಗುತ್ತಿದೆ ಎಂದು ರಷ್ಯಾ ಮತ್ತು ನ್ಯಾಟೋ ಪರಸ್ಪರ ಆರೋಪಿಸಿಕೊಳ್ಳುವುದರೊಂದಿಗೆ ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ರಷ್ಯಾ ಆಕ್ರಮಣ ಮಾಡಲು ಯೋಜಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಉಕ್ರೇನ್ ಆರೋಪಿಸಿದೆ. ಆದರೆ ಮಾಸ್ಕೋ ಅಂತಹ ಹೇಳಿಕೆಗಳನ್ನು ನಿರಾಕರಿಸುವುದನ್ನು ಮುಂದುವರೆಸಿದೆ ಮತ್ತು ಯಾವುದೇ ದೇಶದ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ ಎಂದು ಹೇಳುತ್ತಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತ ಸೇರಿದಂತೆ ಯಾವುದೇ ದೇಶವು ಪಾತ್ರ ವಹಿಸುವ ಪ್ರಯತ್ನವನ್ನು ಯುಎಸ್ ಸ್ವಾಗತಿಸುತ್ತದೆ ಎಂದು ಶ್ವೇತಭವನದ ವಕ್ತಾರರು ಈ ಹಿಂದೆ ಹೇಳಿದ್ದರು.
ಉತ್ತರಕ್ಕೆ ಬೆಲಾರಸ್ ಮತ್ತು ದಕ್ಷಿಣಕ್ಕೆ ಕ್ರೈಮಿಯಾದಲ್ಲಿ ಪೂರ್ವದಲ್ಲಿ ಡೊನ್ಬಾಸ್ ಪ್ರದೇಶದಿಂದ ಗಡಿಯುದ್ದಕ್ಕೂ ಸುಮಾರು 150,000 ಸೈನಿಕರನ್ನು ರಷ್ಯಾ ಇತ್ತೀಚೆಗೆ ನಿಯೋಜಿಸಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಉಕ್ರೇನಿಯನ್ ಸರ್ಕಾರದ ನಿಯಂತ್ರಿತ ಪ್ರದೇಶದಲ್ಲಿನ ಸ್ಟಾನಿಟ್ಸಿಯಾ ಲುಹಾನ್ಸ್ಕಾದ ಡಾನ್ ಬಾಸ್ ನಲ್ಲಿ ಗುರುವಾರ ರಷ್ಯಾ ನಡೆಸಿದ ಶೆಲ್ ದಾಳಿ ಶಿಶು ವಿಹಾರಕ್ಕೆ ಅಪ್ಪಳಿಸಿದ್ದು, ಇಬ್ಬರು ಶಿಕ್ಷಕರು ಗಾಯಗೊಂಡಿರುವುದಾಗಿ ಕೀವ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ತಿಳಿಸಿದೆ.