ಬದಿಯಡ್ಕ: ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುತ್ರ ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎನ್.ಕೃಷ್ಣ ಭಟ್ ತಮ್ಮ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸುದೀರ್ಘ ೧೭ ವರ್ಷಗಳ ತಮ್ಮ ಗ್ರಾಮಪಂಚಾಯಿತಿ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಚುನಾಯಿತ ಜನಪ್ರತಿನಿಧಿಯಾಗಿ ೫ ವರ್ಷಗಳ ಕಾಲ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿಯೂ, ೫ ವರ್ಷ ಉಪಾಧ್ಯಕ್ಷ, ೫ ವರ್ಷ ಸದಸ್ಯರಾಗಿಯೂ ಅವರು ನಾಡಿನ ಜನರ ಸೇವೆಸಲ್ಲಿಸಿದ್ದರು. ತಂದೆಯವರ ನಿಧನದ ನಂತರ ಅವರ ಜನಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಕರ್ತವ್ಯವನ್ನು ಮುಂದಿಟ್ಟುಕೊಂಡು ರಾಜೀನಾಮೆಯನ್ನು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ತಂದೆ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರೊಂದಿಗೆ ಸೇರಿ ಈಗಾಗಲೇ ೨೬೫ ಮನೆಗಳನ್ನು ಬಡವರಿಗೆ ನೀಡಿದ್ದ ಕೆ.ಎನ್. ಕೃಷ್ಣ ಭಟ್ ಅವರು ಮುಂದಿನ ದಿನಗಳಲ್ಲಿ ಬಡಜನರಿಗೆ ನೆರವಾಗುವ ಸೂಚನೆಯನ್ನು ನೀಡಿದ್ದಾರೆ.
ಸಾಮೂಹಿಕ ಮದುವೆ, ಬಡಜನರ ಮನೆ ರಿಪೇರಿ ಮೊದಲಾದ ಕಾರ್ಯಗಳಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಬದಿಯಡ್ಕ ಗ್ರಾಮಪಂಚಾಯಿತಿ ಪಟ್ಟಾಜೆ ೧೪ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ೧೫೦ ಮತಗಳ ಅಂತರದಿಂದ ವಿಜಯಿಯಾಗಿದ್ದರು. ಗುರುವಾರ ಮಧ್ಯಾಹ್ನ ಗ್ರಾಮಪಂಚಾಯಿತಿ ಸಹಕಾರ್ಯದರ್ಶಿಗೆ ರಾಜೀನಾಮೆ ಪ್ರತಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್., ಗ್ರಾಪಂ ಸದಸ್ಯ ಡಿ.ಶಂಕರ, ಬ್ಲೋಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ನೀರ್ಚಾಲು, ವಿಜಯಸಾಯಿ ಬದಿಯಡ್ಕ, ಮಹೇಶ್ ವಳಕ್ಕುಂಜ, ಅವಿನಾಶ್ ರೈ, ನರೇಂದ್ರ ಬಿ.ಎನ್., ಸುನಿಲ್ ಮೂಕಂಪಾರೆ ಮೊದಲಾದವರು ಜೊತೆಗಿದ್ದರು.
ಮೂಲ ಪಕ್ಷದಿಂದ ಮರಳಿದ್ದೇ ಮುಳುವಾಯಿತೇ:
ಕೆ.ಎನ್. ಕೃಷ್ಣ ಭಟ್ ಇತ್ತೀಚೆಗೆ ನಿಧನರಾದ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುತ್ರರಾಗಿದ್ದು, ಮೂಲತಃ ಕಾಂಗ್ರೆಸ್ ಪಕ್ಷದ ನೇತಾರರಾಗಿ ಆರಂಭದಿಂದಲೇ ಗುರುತಿಸಿಕೊಂಡವರು. ತಮ್ಮ ಸಮಾಜ ಸೇವೆ ಕಾರ್ಯಗಳಿಗೆ ಕಾಂಗ್ರೆಸ್ಸ್ ಆರಂಭದಿಂದಲೂ ಇವರಿಗೆ ಬೆನ್ನೆಲುಬಾಗಿತ್ತು. ಕಳೆದ ಸ್ಥಳೀಯಾಡಳಿತ ಚುನಾವಣೆ ಸಂದರ್ಭ ಕಾಂಗ್ರೆಸ್ಸ್ ಒಳ ರಾಜಕೀಯದಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ಆಶ್ಚರ್ಯಕರವಾಗಿ ಸೇರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಆ ಬಳಿಕ ಕೆ.ಎನ್ ಕೃಷ್ಣ ಭಟ್ ಹೊಸ ಪಕ್ಷದೊಂದಿಗೆ ಹೊಂದಾಣಿಕೆಯಾಗುವಲ್ಲಿ ಸೋತಿದ್ದರು ಎನ್ನಲಾಗಿದೆ.
ಅಭಿಮತ:
ತಂದೆಯವರ ಆದರ್ಶಜೀವನವನ್ನು ಮುಂದುವರಿಸಿಕೊಂಡು ಹೋಗುವ ಬಯಕೆಯಿದೆ. ಅದಕ್ಕಾಗಿ ಹೆಚ್ಚಿನ ರೀತಿಯಲ್ಲಿ ತೊಡಗಿಕೊಳ್ಳುವುದಕ್ಕಾಗಿ ಗ್ರಾಮಪಂಚಾಯಿತಿ ಸದಸ್ಯನಾಗಿ ಮುಂದುವರಿಯಲು ಕಷ್ಟವಾಗುವುದು ಎಂಬ ಉದ್ದೇಶದಿಂದ ರಾಜೀನಾಮೆಯನ್ನು ನೀಡಿರುತ್ತೇನೆ.
- ಕೆ.ಎನ್.ಕೃಷ್ಣ ಭಟ್, ಕಿಳಿಂಗಾರು