HEALTH TIPS

ನಿಗೂಢ ಯೋಗಿ ಚಿತ್ರಾ-ಎನ್​ಎಸ್​ಇ

                ನವದೆಹಲಿ :ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ)ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸ್ಥಾನಕ್ಕೆ 2013ರಲ್ಲಿ ಆಗಮಿಸಿದ ಚಿತ್ರಾ ರಾಮಕೃಷ್ಣ ಬಗ್ಗೆ ಕಾರ್ಪೆರೇಟ್ ವಲಯದಲ್ಲೊಂದು ಮೆಚ್ಚುಗೆ ಇತ್ತು. ವೃತ್ತಿಯಲ್ಲಿ ಲೆಕ್ಕಪರಿಶೋಧಕಿ ಆಗಿದ್ದ ಅವರು, ಎನ್​ಎಸ್​ಇ ಗಣಕೀಕರಣ ಮತ್ತು ಸರ್ಕಾರ ಇಪಿಎಫ್​ಒದ ಫಂಡ್ ಅನ್ನು ಷೇರುಗಳಲ್ಲಿ ಹೂಡಿಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

             ಆದರೆ, 2016ರಲ್ಲಿ ವೈಯಕ್ತಿಕ ಕಾರಣ ಕೊಟ್ಟು ದಿಢೀರಾಗಿ ಎನ್​ಎಸ್​ಇ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ವಿವಾದದ ಕೇಂದ್ರಬಿಂದು.

              ಎನ್​ಎಸ್​ಇನ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿದ್ದ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೆ ಒಳಪಡಿಸಿತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಚಿತ್ರಾ ರಾಮಕೃಷ್ಣ ಮತ್ತು ಆನಂದ ಸುಬ್ರಮಣಿಯನ್ ಅವರ ಮನೆಗಳಲ್ಲಿ ಸಾಕ್ಷ್ಯಗಳಿಗಾಗಿ ಶೋಧ ನಡೆಸಿತ್ತು. ಎನ್​ಎಸ್​ಇನ ಕಾರ್ಪೆರೇಟ್ ಆಡಳಿತದಲ್ಲಿ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಅದರ ಚೌಕಟ್ಟಿನಲ್ಲಿ ಚಿತ್ರಾ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ.

               ಸಿಬಿಐ ದಾಖಲಿಸಿಕೊಂಡ ಎಫ್​ಐಆರ್​ನಲ್ಲಿರುವ ಅಂಶ ಇಷ್ಟು - 'ಎನ್​ಎಸ್​ಇನ ಸರ್ವರ್ ವ್ಯವಸ್ಥೆಯನ್ನು ಖಾಸಗಿ ಕಂಪನಿ ದೆಹಲಿ ಮೂಲದ ಒಪಿಜಿ ಸೆಕ್ಯುರೀಟಿಸ್ ಪ್ರೖೆವೇಟ್ ಲಿಮಿಟೆಡ್​ನ ಮಾಲೀಕ ಸಂಜಯ್ ಗುಪ್ತಾ ಮತ್ತು ಪ್ರಮೋಟರ್​ಗಳು ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ, ಮುಂಬೈನ ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳು 2010-12ರ ಅವಧಿಯಲ್ಲಿ ಸ್ಟಾಕ್ ಎಕ್ಸ್​ಚೇಂಜ್​ನ ಸರ್ವರ್​ಗೆ ಲಾಗಿನ್ ಆಗುವುದಕ್ಕೆ ಹೊರಗಿನ ಕಂಪನಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ರೀತಿ ಮಾಡಿದ ಷೇರುಪೇಟೆಯ ಇತರ ಕಂಪನಿಗಳಿಗಿಂತ ಮೊದಲೇ ಮಾಹಿತಿ ಪಡೆಯಲು ಅವಕಾಶ ನೀಡಿದ್ದರು. ಎನ್​ಎಸ್​ಇನ ಟ್ರೇಡಿಂಗ್ ದತ್ತಾಂಶಗಳ ಪ್ರಕಾರ, ಮೊದಲು ಲಾಗಿನ್ ಆಗಿರುವ ಪ್ರಕರಣಗಳಲ್ಲಿ ಶೇಕಡ 90 ಲಾಗಿನ್ ಸಂಜಯ್ ಗುಪ್ತಾ ಹೆಸರಲ್ಲಿರುವುದಾಗಿ ಆರೋಪಿಸಲಾಗಿದೆ'.

ಸೆಬಿ ಆಂತರಿಕ ತನಿಖೆ: ಎನ್​ಎಸ್​ಇ 2017ರಲ್ಲಿ ಐಪಿಒ ಬಿಡುಗಡೆ ಮಾಡಿ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಆದರೆ, ಸರ್ವರ್ ಅನ್ನು ಕೋ-ಲೊಕೇಶನ್ ಮೂಲಕ ಶೇರ್ ಮಾಡಿಕೊಂಡಿದ್ದ ಕಾರಣ ಎನ್​ಎಸ್​ಇ ಪ್ರಯತ್ನಕ್ಕೆ ಸೆಬಿ ತಡೆ ನೀಡಿತ್ತು. ಮೂರು ವರ್ಷಗಳ ತನಿಖೆ ಬಳಿಕ ಎನ್​ಎಸ್​ಇಗೆ 90 ದಶಲಕ್ಷ ಡಾಲರ್​ಗೂ ಅಧಿಕ ದಂಡ ವಿಧಿಸಿತು. ಅಲ್ಲದೆ ಆರು ತಿಂಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಹಣ ಸಂಗ್ರಹಿಸದಂತೆ ನಿಷೇಧ ಹೇರಿತ್ತು. ಇದನ್ನು ಎನ್​ಎಸ್​ಇ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಬಳಿಕ ಐಪಿಒ ಬಿಡುಗಡೆಗೆ ಸೆಬಿಯಿಂದ ಅನುಮತಿ ಪಡೆದಿತ್ತು. ಇದಕ್ಕಾಗಿ ಸಲ್ಲಿಸಿದ ದಾಖಲೆಗಳು ಈಗ ಸೆಬಿಯ ಪರಿಶೀಲನೆಯಲ್ಲಿವೆ.

               ಲುಕ್​ಔಟ್ ನೋಟಿಸ್: ಚಿತ್ರಾ ರಾಮಕೃಷ್ಣ, ಎನ್​ಎಸ್​ಇನ ಇನ್ನೊಬ್ಬ ಮಾಜಿ ಸಿಇಒ ರವಿನಾರಾಯಣ್, ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ ಸುಬ್ರಮಣಿಯನ್ ಅವರ ವಿರುದ್ಧ ಸಿಬಿಐ ಲುಕ್​ಔಟ್ ನೋಟಿಸ್ ಜಾರಿಗೊಳಿಸಿದ್ದು, ದೇಶ ಬಿಟ್ಟು ಹೋಗದಂತೆ ತಡೆ ನೀಡಿದೆ.

ಆನಂದ್ ನೇಮಕದಲ್ಲಿ ಅಕ್ರಮ: ಸೆಕ್ಯುರಿಟೀಸ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶುಕ್ರವಾರ ಪ್ರಕಟಿಸಿರುವ 190 ಪುಟಗಳ ಆದೇಶದಲ್ಲಿ ಎನ್​ಎಸ್​ಇ ನೀಡಿದ ಹಲವು ಮಾಹಿತಿಗಳು ಬಹಿರಂಗವಾಗಿವೆ. ಚಿತ್ರಾ ರಾಮಕೃಷ್ಣ ನಿಗೂಢ ಇಮೇಲ್​ನಲ್ಲಿ ಬಂದ ಸಂದೇಶವನ್ನು ಮಾರ್ಗದರ್ಶನದ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರು. ಇದರಂತೆ ಅವರು 2013ರಲ್ಲಿ ಸಿಇಒ ಆದ ಬಳಿಕ, ಸರ್ಕಾರಿ ಸ್ವಾಮ್ಯದ ಬಾಲ್ಮರ್ ಲಾರಿ ಕಂಪನಿಯಲ್ಲಿ 15 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಆನಂದ ಸುಬ್ರಮಣಿಯನ್ ಅವರನ್ನು ಚೀಫ್ ಸ್ಟ್ರಾಟಜಿ ಆಫೀಸರ್(ಸಿಎಸ್​ಒ) ಆಗಿ ನೇಮಕ ಮಾಡಿದ್ದರು. ಈ ಹುದ್ದೆಯ ವೇತನ 1.38 ಕೋಟಿ ರೂ. ಇತ್ತು. ಯೋಗಿ ನೀಡಿದ ಮಾರ್ಗದರ್ಶನದ ಪ್ರಕಾರ ಒಂದು ವರ್ಷದ ಬಳಿಕ ಗ್ರೂಪ್ ಆಪರೇಟಿಂಗ್ ಆಫೀಸರ್ (ಜಿಒಒ) ಮತ್ತು ಎಂಡಿಗೆ ಸಲಹೆಗಾರ ಎಂಬ ಬಡ್ತಿಯನ್ನೂ ಕೊಟ್ಟಿದ್ದರು. ಅಲ್ಲದೆ ವಾರಕ್ಕೆ ಐದೇ ದಿನ ಕೆಲಸ, ಅದರಲ್ಲಿ ಮೂರು ದಿನ ಕಚೇರಿಗೆ ಬರಲು ಅನುಮತಿ ನೀಡಿದ್ದರು. ಉಳಿದಂತೆ ಐಚ್ಛಿಕವಾಗಿ ಕೆಲಸ ಮಾಡಲು ಸೂಚಿಸಿದ್ದರು ಎಂಬ ಉಲ್ಲೇಖವಿದೆ.

             ಯೋಗಿಯ ಪ್ರಭಾವ: ಚಿತ್ರಾ ರಾಮಕೃಷ್ಣ ಅವರು ಸಿಇಒ ಆಗಿದ್ದಾಗ ಗುರುತು ಪರಿಚಯವೇ ಇಲ್ಲದ ಹಿಮಾಲಯದ ಒಬ್ಬ ಯೋಗಿಯ ಪ್ರಭಾವಕ್ಕೆ ಒಳಗಾಗಿದ್ದ ವಿಚಾರ ಫೆ.11ರಂದು ಬೆಳಕಿಗೆ ಬಂತು. ಈಕೆ ಕಾರ್ಪೆರೇಟ್ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಇಮೇಲ್ (ಜಿಜಢಚ್ಜuಠಚಞಚಃಟ್ಠಠ್ಝಿಟಟk.ಟಞ)ಗೆ ರವಾನಿಸಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ಇದೇ ಮೇಲ್​ನಿಂದ ಆಗಮಿಸುವ ಇಮೇಲ್ ಚಿತ್ರಾ ರಾಮಕೃಷ್ಣ ಮತ್ತು ಆನಂದ ಸುಬ್ರಮಣಿಯನ್ ಅವರನ್ನು ಉದ್ದೇಶಿಸಿ ಇರುತ್ತಿತ್ತು ಎಂಬ ಅಂಶ ಬಹಿರಂಗವಾಗಿದೆ. ಹಿಮಾಲಯದ ನಿಗೂಢ ಯೋಗಿ ಯಾರು ಎಂಬುದು ಸದ್ಯ ಕುತೂಹಲ ಕೆರಳಿಸಿರುವ ವಿಚಾರ. ಎನ್​ಎಸ್​ಇ ಮೂಲಗಳ ಪ್ರಕಾರ ಈ 'ಯೋಗಿ' ಆನಂದ ಸುಬ್ರಮಣಿಯನ್ ಇರಬಹುದೇ ಎಂಬ ಸಂದೇಹ ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries