ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದ ನೆರಳಿನ ಮರ(ಸಹಿ ಮರ)ಗಳಿಗೆ ಕೊನೆಗೂ ಕೊಡಲಿಯೇಟು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯನ್ವಯ ಈ ಪ್ರದೇಶದ ಬಹುತೇಕ ನೆರಳು ನೀಡುವ ಮರಗಳು ಧರಾಶಾಯಿಯಾಗಿದ್ದು ಇವುಗಳಲ್ಲಿ 'ಸಹಿ ಮರ'ಗಳೂ ಒಳಗೊಂಡಿದೆ.
ಕೇರಳವನ್ನು ಬೆಚ್ಚಿಬೀಳಿಸಿದ ಮಾರಕ ಎಂಡೋಸಲ್ಫಾನ್ ವಿರುದ್ಧದ ಹೋರಾಟಗಳಿಗೆ ಸಾಕ್ಷಿಯಾಗಿದ್ದ ಬೃಹತ್ ಮರಗಳು ಇನ್ನು ನೆನಪಾಗಿ ಉಳಿಯಲಿದೆ. ಸರ್ಕಾರದ ಗಮನ ಸೆಳೆಯಲು ಇಲ್ಲಿಂದ ನಡೆಸಲಾಗುತ್ತಿದ್ದ 'ಪತ್ರ ಮುಷ್ಕರ'ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಅಂಚೆ ಪೆಟ್ಟಿಗೆಯೂ ಮೂಲೆ ಸೇರಿದೆ. ಮಾತ್ರವಲ್ಲ ರಾಜ್ಯ, ರಾಷ್ಟ್ರಮಟ್ಟದ ಮುಖಂಡರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನ ಇದೇ ಮರದಡಿಯಲ್ಲಿ ನಡೆಯುತ್ತಿತ್ತು.
ಮಡಿಕೇರಿ ನಿವಾಸಿ ಹಾಗೂ ಚೆರ್ಕಳದ ಮನೆಕೆಲಸದ ಬಾಲಕಿ ಸಫಿಯಾ ಕೊಲೆಪ್ರಕರಣದ ತನಿಖೆಗೆ ಆಗ್ರಹಿಸಿ ನಿರಂತರವಾಗಿ ಇದೇ ಮರದಡಿಯಲ್ಲಿ ಮುಷ್ಕರ ನಡೆದು ಕೊನೆಗೂ ಆ ಕುಟುಂಬಕ್ಕೆ ನ್ಯಾಯ ದೊರಕುವಂತಾಗಿತ್ತು. ಚೆಂಬರಿಕ ಖಾಸಿ ಸಿ.ಎಂ ಅಬ್ದುಲ್ಲ ಮೌಲವಿ ಕೊಲೆಪ್ರಕರಣ, ಕೆಲ್-ಭೆಲ್ ಸಂಸ್ಥೆ ಕಾರ್ಮಿಕರಿಗೆ ವೇತನಕ್ಕಾಗಿ ನಡೆದ ಮುಷ್ಕರ ಸೇರಿದಂತೆ ಹಲವಾರು ಹೋರಾಟಗಳಿಗೆ ಸಾಕ್ಷಿಯಾಗಿದ್ದ ಮರಗಳು ಅಭಿವೃದ್ಧಿ ಹೆಸರಲ್ಲಿ ನಿರ್ನಾಮಗೊಂಡಿದೆ.