ಚೆನ್ನೈ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮಗೆ ದೂರವಾಣಿ ಕರೆ ಮಾಡಿದ್ದು, ಬಿಜೆಪಿಯೇತರ ರಾಜ್ಯಗಳಲ್ಲಿ ಸಾಂವಿಧಾನಿಕ ಅತಿಕ್ರಮಣ ಹಾಗೂ ರಾಜ್ಯಪಾಲರ ಲಜ್ಜೆಗೆಟ್ಟ ಅಧಿಕಾರ ದುರ್ಬಳಕೆ ಬಗ್ಗೆ ಕಳವಳ ಮತ್ತು ವೇದನೆಯನ್ನು ಹಂಚಿಕೊಂಡಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ತಿಳಿಸಿದ್ದಾರೆ.
ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಭೆಯೊಂದನ್ನು ಆಯೋಜಿಸಲು ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ. ರಾಜ್ಯ ಸ್ವಾಯತ್ತತೆಯನ್ನು ಎತ್ತಿಹಿಡಿಯುವಲ್ಲಿ ಡಿಎಂಕೆಯ ಬದ್ಧತೆಯ ಬಗ್ಗೆ ನಾನು ಅವರಿಗೆ ಭರವಸೆ ನೀಡಿದ್ದೇನೆ. ದೆಹಲಿ ಹೊರಗಡೆ ಶೀಘ್ರದಲ್ಲಿಯೇ ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಮಾವೇಶ ನಡೆಯಲಿದೆ ಎಂದು ಸ್ಟಾಲಿನ್ ಟ್ವೀಟ್ ಮೂಲಕ ಹೇಳಿದ್ದಾರೆ.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶವನ್ನು ಮುಂದೂಡಿದ ಬಂಗಾಳ ರಾಜ್ಯಪಾಲರ ಕ್ರಮವು ನಿಯಮಗಳು ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯಲು ರಾಜ್ಯದ 'ಸಾಂಕೇತಿಕ' ಮುಖ್ಯಸ್ಥರು ಮಾದರಿಯಾಗಬೇಕು. ಪ್ರಜಾಪ್ರಭುತ್ವದ ಸೌಂದರ್ಯವು ಪರಸ್ಪರ ಗೌರವವನ್ನು ವಿಸ್ತರಿಸುವಲ್ಲಿ ಅಡಗಿದೆ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು. ಸ್ಟಾಲಿನ್ ಅವರ ಟ್ವೀಟ್ ಗೆ ರಾಜ್ಯಪಾಲ ಧಂಕರ್ ಪ್ರತಿಕ್ರಿಯಿಸುವ ಮೂಲಕ ತಮ್ಮನ್ನು ಸಮರ್ಥಿಸಿಕೊಂಡಿದ್ದರು.
ಪಶ್ಚಿಮ ಬಂಗಾಳ ರಾಜ್ಯಪಾಲ ಧಂಕರ್ ಶನಿವಾರ ರಾಜ್ಯ ಸರ್ಕಾರದ ಶಿಫಾರಸ್ಸಿನ ಆಧಾರದಮೇಲೆ ಅಧಿವೇಶನವನ್ನು ಮುಂದೂಡಿದ್ದರು.