ಖಾರ್ಕಿವ್: ಉಕ್ರೇನಿನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ರಷ್ಯಾ ಸೇನೆ ಖಾರ್ಕಿವ್ ನಗರ ಪ್ರವೇಶಿಸಿದ್ದು ನಾಗರಿಕರು ಬಂಕರುಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರಲ್ಲಿ ಕರ್ನಾಟಕದ ವಿದ್ಯಾರ್ಥಿಗಳೂ ಇದ್ದು ತಮಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ಒಂದೆರಡು ದಿನಗಳಿಂದ ನಿದ್ದೆ ಮಾಡಲಾಗುತ್ತಿಲ್ಲ. ಬಾಂಬಿನ ಸದ್ದು ರಾತ್ರಿಯಿಡೀ ಕೇಳಿಬರುತ್ತಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಧ್ಯಾಹ್ನ ಇಸ್ರೇಲ್ ಬಸ್ ಬಂದು ಅವರ ವಿದ್ಯಾರ್ಥಿಗಳನ್ನು ಕರೆದುಕೊಂಡು ಸುರಕ್ಷಿತವಾಗಿ ಸ್ಥಳಾಂತರ ಮಾಡಿತು. ಭಾರತ ಸರ್ಕಾರ ಏಕೆ ಆ ಕೆಲಸ ಮಾಡಲಾಗುತ್ತಿಲ್ಲ ಎಂದು ಕರ್ನಾಟಕ ಮೂಲದ ವಿದ್ಯಾರ್ಥಿನಿ ಶಿವಾನಿ ಮಡಿವಾಳರ್ ಪ್ರಶ್ನಿಸಿದ್ದಾರೆ.
ಯುದ್ಧ ಪ್ರಾರಂಭಗೊಂಡ ತಕ್ಷಣ ಖಾರ್ಕಿವ್ ನಲ್ಲಿ ನೆಲೆಸಿರುವ ಸಾವಿರಾರು ವಿದ್ಯಾರ್ಥಿಗಳು ಖಾರ್ಕೆವ್ ನಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಆದರೆ ಅವರಿಂದ ಯಾವುದೇ ನೆರವು ದೊರೆತಿಲ್ಲ ಎಂದು ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ.