ನವದೆಹಲಿ/ಮೆಲ್ಬೋರ್ನ್: ನಾಲ್ಕು ದೇಶಗಳ ಕ್ವಾಡ್ ಕೂಟ ಚೀನಾವನ್ನು ಕಟ್ಟಿ ಹಾಕಿ ಅಮೆರಿಕದ ಅಧಿಪತ್ಯವನ್ನು ಉಳಿಸಿಕೊಳ್ಳುವ ಸಾಧನವಾಗಿದೆ ಎಂದು ಚೀನಾ ಮಾಡಿರುವ ಟೀಕೆಗೆ ಭಾರತ ಖಡಕ್ ತಿರುಗೇಟು ನೀಡಿದೆ. ಕ್ವಾಡ್ ಧೋರಣೆ ಹಾಗೂ ಕೃತ್ಯಗಳು ಸ್ಪಷ್ಟವಾಗಿವೆ.
ಅದನ್ನು ಪದೇ ಪದೇ ಟೀಕಿಸುವುದರಿಂದ ಕೂಟದ ವಿಶ್ವಾಸಾರ್ಹತೆ ಕುಂದುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಬಿಗುವು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಳದ ಸಂಗತಿಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವ ಗಡಿ ರೇಖೆಯಲ್ಲಿ (ಎಲ್ಎಸಿ) ಪಡೆಗಳನ್ನು ಜಮಾಯಿಸಬಾರದು ಎಂಬ ಭಾರತದೊಂದಿಗೆ 2020ರಲ್ಲಿ ಮಾಡಿಕೊಂಡ ಲಿಖಿತ ಒಪ್ಪಂದವನ್ನು ಚೀನಾ ಅಗೌರವಿಸಿದ್ದೇ ಈಗಿನ ಪರಿಸ್ಥಿತಿ ಉದ್ಭವಿಸಲು ಕಾರಣ ಎಂದು ಅವರು ಹೇಳಿದ್ದಾರೆ.
ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಚರ್ಚೆ ನಡೆದಿದೆ ಎಂದೂ ಜೈಶಂಕರ್ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ವಿವಾದದ ಬಗ್ಗೆ ಜಾಗತಿಕ ಸಮುದಾಯ, ಅದರಲ್ಲೂ ವಿಶೇಷವಾಗಿ ಇಂಡೊ- ಪೆಸಿಫಿಕ್ ವಲಯದ ದೇಶಗಳು ಕಾಳಜಿ ವಹಿಸಲು ಸಕಾರಣವಿದೆ ಎಂದು ಹೇಳಿದ್ದಾರೆ.
ಕ್ವಾಡ್ನ ಧನಾತ್ಮಕ ಕೊಡುಗೆ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಬೇಕಿಲ್ಲ ಎಂದ ಜೈಶಂಕರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹಿ ಹಾಕಿದ್ದ ಬ್ಯಾಟ್ಒಂದನ್ನು ಆಸ್ಟ್ರೆಲಿಯಾ ವಿದೇಶ ಸಚಿವೆ ಮಾರಿಸ್ ಪೈನ್ರಿಗೆ ಕೊಡುಗೆಯಾಗಿ ನೀಡಿದ್ದರು.