ತಿರುವನಂತಪುರ: 'ಯುದ್ಧ ನಡೆಯುವ ಸಾಧ್ಯತೆ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದಾಗ, ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಲಿದ್ದೇವೆ ಎಂದು ನಿರೀಕ್ಷಿಸಿರಲಿಲ್ಲ. ಆ ಕಾರಣಕ್ಕಾಗಿಯೇ ಇಲ್ಲೇ ಉಳಿದೆವು. ಈಗ ನಾವು ಅಕ್ಷರಶಃ ಇಲ್ಲಿ ಸಿಲುಕಿಕೊಂಡಿದ್ದೇವೆ.
ಭೀಕರ ಬಾಂಬ್ ದಾಳಿಗಳಿಂದ ಭೀತಿಗೊಳಗಾಗಿದ್ದೇವೆ' ಎಂದು ಉಕ್ರೇನ್‌ನ ಕೀವ್‌ನಲ್ಲಿ ಸಿಲುಕಿಕೊಂಡಿರುವ ಮಲಯಾಳಿ ವೈದ್ಯ ಡಾ. ಸೀಮೇಶ್ ಶಶಿಧರನ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಸೀಮೇಶ್ ಮತ್ತು ಕುಟುಂಬ ಮೂರು ದಶಕಗಳಿಂದ ಕೀವ್‌ನಲ್ಲಿ ವಾಸವಾಗಿದೆ.
'ನಾವು ವಿಮಾನ ನಿಲ್ದಾಣದ ಸಮೀಪ ವಾಸವಾಗಿದ್ದೇವೆ. ಮುಂಜಾನೆ ಬಾಂಬ್ ಸ್ಫೋಟದ ಸದ್ದು ಕೇಳಿ ಎಚ್ಚರಗೊಂಡೆ. ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದರಿಂದ ಸದ್ಯ ನಾಗರಿಕರು ಸುರಕ್ಷಿತರಾಗಿದ್ದೇವೆ. ಎಲ್ಲರೂ ಮನೆಯಲ್ಲಿಯೇ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಕೇರಳ ಮತ್ತು ಪಂಜಾಬ್‌ನ ವೈದ್ಯ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತ ಸರ್ಕಾರವು ನಮ್ಮನ್ನು ಸ್ಥಳಾಂತರಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ' ಎಂದೂ ಹೇಳಿದ್ದಾರೆ.
ವಿದೇಶಾಂಗ ಸಚಿವರಿಗೆ ಪಿಣರಾಯಿ ಪತ್ರ
2,320 ಮಲಯಾಳಿ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.