'. ಸಮುದ್ರದ ಶಾಖದ ಅಲೆಗಳು ಮಧ್ಯ ಭಾರತೀಯ ಉಪಖಂಡದಲ್ಲಿ ಮಳೆಯ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಮಾನ್ಸೂನ್ ಮೇಲೆ ಪ್ರಭಾವ ಬೀರುತ್ತವೆ. ಅಲ್ಲದೆ, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸುತ್ತವೆ' ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಅತ್ಯಂತ ಹೆಚ್ಚಿನ ತಾಪಮಾನದ ಕಾಲಾವಧಿಯನ್ನು ಹೊಂದಿರುವ ಈ ಶಾಖದ ಅಲೆಗಳು ಸಮುದ್ರದಲ್ಲಿನ ಹವಳದ ದಂಡೆಗಳ ಬಿಳಿಚುಕೊಳ್ಳುವಿಕೆ (ಬ್ಲೀಚಿಂಗ್), ಸೀಗ್ರಾಸ್ ನಾಶ ಮತ್ತು ಕೆಲ್ಫ್ ಕಾಡುಗಳಿಗೆ ನಷ್ಟವುಂಟು ಮಾಡುವುದರಿಂದ ಅಲ್ಲಿನ ಆವಾಸಸ್ಥಾನ ನಾಶವಾಗುತ್ತದೆ. ಇದರಿಂದಾಗಿ ಮೀನುಗಾರಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಪ್ರತಿಪಾದಿಸಲಾಗಿದೆ. ಅಧ್ಯಯನದ ವರದಿಯು 'ಜೆಜಿಆರ್ ಓಷನ್ಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಸಮುದ್ರದ ಶಾಖದ ಅಲೆಗಳಲ್ಲಿ ಗಮನಾರ್ಹ ಹೆಚ್ಚಳವಾಗಿರುವುದನ್ನೂ ಸಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. 2020ರ ಮೇ ತಿಂಗಳಲ್ಲಿ ಸಮುದ್ರದ ಶಾಖದ ಅಲೆಗಳ ನಂತರ ತಮಿಳುನಾಡು ಕರಾವಳಿಯ ಸಮೀಪವಿರುವ ಮನ್ನಾರ್ ಕೊಲ್ಲಿಯಲ್ಲಿ ಶೇ 85ರಷ್ಟು ಹವಳ ದಂಡೆಗಳು ಬಿಳಿಚಿಕೊಂಡಿವೆ ಎಂದೂ ಅಧ್ಯಯನದಲ್ಲಿ ತಿಳಿದುಬಂದಿದೆ.