ಲಖನೌ: ಹಣದುಬ್ಬರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಾಜೀವ್ ಶುಕ್ಲಾ ಅವರು, ಕೇಂದ್ರ ಸರ್ಕಾರ ಈಗ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ ಎಂದು ಗುರುವಾರ ಹೇಳಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾ.7 ರಂದು ಚುನಾವಣೆ ಮುಗಿದ ಮೇಲೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಅಂದರೆ ಪೆಟ್ರೋಲ್ ಬೆಲೆ ಲೀಟರ್‌ಗೆ 20 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 15 ರೂ. ಹೆಚ್ಚಿಸಲಿದೆ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.
ಕಚ್ಚಾ ತೈಲದ ಬೆಲೆ ಹೆಚ್ಚಾದಾಗ ಯುಪಿಎ ಸರ್ಕಾರ ಎಲ್ಲಾ ಹೊರೆಯನ್ನು ತಾನೇ ಹೊತ್ತು, ಸಬ್ಸಿಡಿ ನೀಡಿ ಜನರಿಗೆ ಪರಿಹಾರ ನೀಡಿದೆ. ಈ ಉಕ್ರೇನ್ ಬಿಕ್ಕಟ್ಟಿನ ನೆಪದಲ್ಲಿ, ಬಿಜೆಪಿ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ತೀವ್ರವಾಗಿ ಹೆಚ್ಚಿಸಲು ಬಯಸಿದೆ. ಆದರೆ ಕಚ್ಚಾ ತೈಲ ಬೆಲೆ ಹೆಚ್ಚಳವಾದರೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಒತ್ತಾಯಿಸಿದ್ದಾರೆ.