ಕುಂಬಳೆ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪ್ರೇರಣೆಯಿಂದ ಪ್ರತಿ ಮನೆಯಲ್ಲೂ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು ಲಭ್ಯವಾಗಬೇಕು ಮತ್ತು ಜನರು ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗಿ ಔಷಧಿಗಳಿಂದ ದೂರ ಉಳಿಯಬೇಕು ಎಂಬ ಉದ್ದೇಶದಿಂದ ಗ್ರಾಮರಾಜ್ಯ ಪರಿಕಲ್ಪನೆಯ ಮಾರುಕಟ್ಟೆ ಘಟಕ ಕುಂಬಳೆಯಲ್ಲಿ ಗುರುವಾರ ಅಧಿಕೃತವಾಗಿ ಆರಂಭಗೊಳ್ಳಲಿದೆ. ರಾಸಾಯನಿಕ ಮುಕ್ತವಾದ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಿ ಸ್ಥಳೀಯವಾಗಿ ಆಹಾರ ಪದಾರ್ಥಗಳನ್ನು ಉತ್ಪಾದಿಸಿ ಜನರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿವಿಧ ತಳಿಯ ಸಾವಯವ ಅಕ್ಕಿ ಸಹಿತ ಧಾನ್ಯಗಳು, ವಿವಿಧ ಹಿಟ್ಟುಗಳು ಮೊದಲಾದ ದಿನ ಬಳಕೆಯ ಉತ್ಪನ್ನಗಳನ್ನು ಗ್ರಾಮರಾಜ್ಯದ ಮೂಲಕ ಜನಸಾಮಾನ್ಯರಿಗೆ ತಲಪಿಸುವ ಗುರಿ ಹೊಂದಲಾಗಿದೆ ಎಮದು ಘಟಕದ ಸಂಚಾಲಕ ಗುರುಮೂರ್ತಿ ಎನ್ ಅವರು ಕುಂಬಳೆ ಪ್ರೆಸ್ ಪೋರಂನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳದಲ್ಲಿ ಮೊದಲ ಬಾರಿಗೆ ಕುಂಬಳೆಯಲ್ಲಿ ಗ್ರಾಮರಾಜ್ಯ ಫ್ರಾಂಚೈಸಿಯನ್ನು ಪ್ರಾರಂಭಿಸಲಾಗುತ್ತಿದೆ. ಸಂಸ್ಥೆಯು ಕುಂಬಳೆ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಫೆ.10 ರಂದು ಕುಂಬಳೆ ಗ್ರಾ.ಪಂ.ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ವಾರ್ಡ್ ಪ್ರತಿನಿಧಿ ವಿದ್ಯಾ ಎನ್.ಪಿ., ಕುಂಬಳೆ ಸೇವಾ ಸಹಕಾರಿ ಟೌನ್ ಬ್ಯಾಂಕ್ ಅಧ್ಯಕ್ಷ ನ್ಯಾಯವಾದಿ ಸದಾನಂದ ಕಾಮತ್ ಉಪಸ್ಥಿತರಿರುವರು. ಮುಳ್ಳೇರಿಯ ಮಂಡಲ ಹವ್ಯಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕುಂಬಳೆ ವಲಯ ಅಧ್ಯಕ್ಷ ಡಾ.ಡಿ.ಪಿ.ಭಟ್ ಶುಭಹಾರೈಸುವರು.
ಪತ್ರಿಕಾಗೋಷ್ಠಿಯಲ್ಲಿ ಗುರುಮೂರ್ತಿ ಎನ್, ಕೆ ಉಮೇಶ್ ನಾಯ್ಕ್ ಮತ್ತು ಕೆ ಮುರಳೀಧರ ಯಾದವ್ ಉಪಸ್ಥಿತರಿದ್ದರು.