ತಿರುಪತಿ: ಮಹತ್ವದ ಬೆಳವಣಿಗೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದೆ.
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಪ್ರಸಾದದ ಬೆಲೆಗಳನ್ನು ಏರಿಕೆ ಮಾಡಿದ್ದು, ಸಮಾಧಾನಕರ ವಿಚಾರವೆಂದರೆ ಟಿಟಿಡಿ ಈ ಬಾರಿ ಜಗತ್ ಪ್ರಸಿದ್ಧ ಲಡ್ಡು ಬೆಲೆಯನ್ನು ಏರಿಕೆ ಮಾಡಿಲ್ಲ. ಆದರೆ ಜಿಲೇಬಿ (Jilebi) ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ.
ಈ ಹಿಂದೆ 100 ರೂಪಾಯಿ ಇದ್ದ ಜಿಲೇಬಿ ಬೆಲೆ 500 ರೂಪಾಯಿಗೆ ಏರಿಕೆ ಮಾಡಿದೆ. ದೇವಸ್ಥಾನದಲ್ಲಿ ಆರ್ಜಿತ ಸೇವೆ ಮತ್ತೆ ಬರುವಾಗ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ. ಆದಾಗ್ಯೂ, ಈ ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸಲು, ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್ಗೆ ಬದಲಾಯಿಸಲಾಗುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಮಧ್ಯವರ್ತಿಗಳ ಮಾರಾಟಕ್ಕೆ ಬ್ರೇಕ್
ತಿರುಪತಿಯಲ್ಲಿ ಮಧ್ಯವರ್ತಿಗಳು ಕಾಳ ದಂಧೆ ಹೆಚ್ಚಾಗಿದ್ದು, ಒಂದು ಸೆಟ್ ಪ್ರಸಾದವನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ವಿಚಾರ ಟಿಟಿಡಿ ಗಮನಕ್ಕೆ ಬಂದಿತ್ತು. ಇದನ್ನು ತಡೆಯಲು ಟಿಟಿಡಿ ಮುಂದಾಗಿದ್ದು, ಜೂನ್ 2021 ರಲ್ಲಿ, ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‌ಗೆ ಪ್ರಸ್ತುತ 100ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲವನ್ನು 2000ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಇದೀಗ ಟಿಟಿಡಿ ಈಗ ದರ ಏರಿಕೆ ಮಾಡಿದೆ.
ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡಿದ ವೆಚ್ಚ 147.50ರೂ ಆಗುತ್ತಿದೆ. ಟ್ರಸ್ಟ್ ಬೋರ್ಡ್ ವಿವರವಾದ ಚರ್ಚೆಯನ್ನು ನಡೆಸಿತು ಮತ್ತು ಬೆಲೆಯನ್ನು 500 ರೂ.ಗೆ ಹೆಚ್ಚಿಸಲು ನಿರ್ಧರಿಸಿತು. ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ 239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ. ಆಂಧ್ರಪ್ರದೇಶದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷ ಪಯ್ಯವುಲ ಕೇಶವ್ ಅವರು ಟಿಟಿಡಿ ಟ್ರಸ್ಟ್ ಬೋರ್ಡ್ ಕಾಳದಂಧೆ ನಿಲ್ಲಿಸುವ ಉದ್ದೇಶದಿಂದ ಐದು ಪಟ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.