ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದ ಹಲವೆಡೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಹಿಂಸಾಚಾರದ ಬಗ್ಗೆ ವರದಿಯಾಗಿದೆ.
ಉತ್ತರ 24 ಪರಗಣದಲ್ಲಿನ ವಾರ್ಡ್ ನಂಬರ್ 9 ರಲ್ಲಿ ಮತದಾನ ವೇಳೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಎರಡು ಇವಿಎಂಗಳನ್ನು ಧ್ವಂಸಗೊಳಿಸಲಾಗಿದೆ. ರಾಜ್ಯಾದ್ಯಂತ ಇದೇ ರೀತಿಯ ಪರಿಸ್ಥಿತಿವೇರ್ಪಟ್ಟಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಮತದಾನ ಮಾಡಲು ಬಿಡುತ್ತಿಲ್ಲ. ಎಲ್ಲಾ ಬೂತ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.
ಪೊಲೀಸರು ಮತ್ತು ರೌಡಿಗಳು ಮಾತ್ರ ಮತದಾನ ಮಾಡುತ್ತಿದ್ದಾರೆ. ಮತ ಹಾಕಲು ಮತದಾರರು ಹೆದರುತ್ತಿದ್ದಾರೆ. ವಿಶೇಷವಾಗಿ ಬೆಂಗಾಲಿ ಜನರಿಗೆ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ. ಮುಸ್ಲಿಂರು ಕೂಡಾ ಮತದಾನ ಮಾಡದಂತಾಗಿದೆ. ಇಲ್ಲಿನ ಪೊಲೀಸರು ಗಾಂಧೀಜಿ ಅವರ ಮೂರು ಕೋತಿಗಳಲ್ಲಿ ಒಂದರಂತೆ ಆಟವಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಟೀಕಿಸಿದ್ದಾರೆ.
ಕಳೆದ ರಾತ್ರಿ ಮಿಡ್ನಾಪುರ ಪುರಸಭೆಯ ವಾರ್ಡ್ ನಂಬರ್ 8ರ ಬೂತ್ ಸಂಖ್ಯೆ 163ರ ಬಳಿ ಟಿಎಂಸಿ ತಮ್ಮ ಟೆಂಟ್ ನ್ನು ಸುಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದರ ವಿರುದ್ಧ ಪೊಲೀಸರಿಗೆ ತಿಳಿಸಿದ್ದೇವೆ ಆದರೆ, ಅವರು ಬಂದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.