ಸ್ಯಾನ್‌ಫ್ರಾನ್ಸಿಸ್ಕೊ: ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲಿನ ದಾಳಿಯನ್ನು ಮುಂದುವರಿಸಿವೆ. ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಣ ಸಂಪಾದಿಸುವ ರಷ್ಯಾದ ಮಾಧ್ಯಮಗಳಿಗೆ ಫೇಸ್‌ಬುಕ್ ನಿರ್ಬಂಧ ವಿಧಿಸಿದೆ.
'ನಾವು ಈಗ ರಷ್ಯಾದ ಮಾಧ್ಯಮಗಳು ವಿಶ್ವದ ಯಾವುದೇ ಭಾಗದಲ್ಲಿ ನಮ್ಮ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸುತ್ತಿದ್ದೇವೆ' ಎಂದು ಫೇಸ್‌ಬುಕ್‌ನ ಭದ್ರತಾ ನೀತಿ ವಿಭಾಗ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಫೇಸ್‌ಬುಕ್ 'ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಿಗೆ ಲೇಬಲ್ ಹಾಕುವುದನ್ನು ಮುಂದುವರಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನೆಲೆಗಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೆಲವೊಮ್ಮೆ ತಪ್ಪುದಾರಿಗೆಳೆಯುವ ಮಾಹಿತಿ ಕೂಡ ಕಂಡುಬರುತ್ತಿದೆ. ಆದರೆ, ದಶಕಗಳಲ್ಲಿ ತಲೆದೋರಿರುವ ಯುರೋಪಿನ ಅತಿದೊಡ್ಡ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ಗುರುತಿಸುವತ್ತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಸಂಘರ್ಷದ ನೈಜ-ಸಮಯದ ಮೇಲ್ವಿಚಾರಣೆ ಕೂಡ ಮಾಡುತ್ತಿವೆ.
'ನಿನ್ನೆ (ಶುಕ್ರವಾರ), ರಷ್ಯಾದ ನಾಲ್ಕು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವಿಚಾರದ ಸ್ವತಂತ್ರ ಫ್ಯಾಕ್ಟ್ ಚೆಕ್ ಮತ್ತು ಲೇಬಲ್ ಹಾಕುವುದನ್ನು ನಿಲ್ಲಿಸುವಂತೆ ರಷ್ಯಾದ ಅಧಿಕಾರಿಗಳು ನಮಗೆ ಆದೇಶಿಸಿದರು. 'ನಾವು ನಿರಾಕರಿಸಿದ್ದೇವೆ'' ಎಂದು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾದ ನಿಕ್ ಕ್ಲೆಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಷ್ಯಾದ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ, ಫೇಸ್‌ಬುಕ್ ಬಳಕೆಯನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮ ನಿಯಂತ್ರಕ ಹೇಳಿದ ಗಂಟೆಗಳ ನಂತರ ಅವರ ಈ ಹೇಳಿಕೆ ಬಂದಿದೆ.
ಕಳೆದ ವರ್ಷ ಅಫ್ಗಾನಿಸ್ತಾನವು ತಾಲಿಬಾನ್ ವಶಕ್ಕೆ ಜಾರಿದ ನಂತರ ಜಾರಿಗೆ ತಂದಿದ್ದ ಟೂಲ್ ಒಂದನ್ನು ಉಕ್ರೇನ್ ಜನರಿಗೂ ನೀಡಿರುವ ಫೇಸ್‌ಬುಕ್, ಭದ್ರತೆಯ ದೃಷ್ಟಿಯಿಂದಾಗಿ ಜನರು ತಮ್ಮ ಪ್ರೊಫೈಲ್‌ಗಳನ್ನು ಲಾಕ್ ಮಾಡಲು ಅನುಮತಿಸುವ ವೈಶಿಷ್ಟ್ಯವನ್ನು ನೀಡಿದೆ.
ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷಕ್ಕೆ ಪ್ರತಿಕ್ರಿಯೆಯಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಫೇಸ್‌ಬುಕ್ ವಿಶೇಷ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಿದೆ ಎಂದು ಗ್ಲೀಚರ್ ಹೇಳಿದ್ದಾರೆ.