ಬೆಂಗಳೂರು: ಕೊರೋನಾ, ಓಮಿಕ್ರಾನ್ ರೂಪಾಂತರಿಯ ವಿರುದ್ಧದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಬೆಂಗಳೂರಿನ ವಿಜ್ಞಾನಿಗಳು ಸ್ವಯಂ ಸೋಂಕುನಿವಾರಕ, ಬಯೋಡಿಗ್ರೆಡೆಬಲ್ ಮಾಸ್ಕ್ ನ್ನು ಅಭಿವೃದ್ಧಿಪಡಿಸಿದ್ದಾರೆ.
ಕೈಗಾರಿಕಾ ಸಂಸ್ಥೆಯ ಪಾಲುದಾರಿಕೆಯ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಈ ಮಾಸ್ಕ್ ತಾಮ್ರ-ಆಧಾರಿತ ನ್ಯಾನೊಪರ್ಟಿಕಲ್-ಲೇಪಿತ ಆಂಟಿವೈರಲ್ ಆಗಿದೆ.
ಜೈವಿಕ ವಿಘಟನೀಯ ಮಾಸ್ಕ್ ಇದಾಗಿದ್ದು, ಸರಾಗವಾಗಿ ಉಸಿರಾಡಬಲ್ಲ ಹಾಗೂ ತೊಳೆದು ಮರು ಬಳಕೆ ಮಾಡಬಹುದಾಗಿದ್ದು ಕೋವಿಡ್-19 ವೈರಾಣುವಿನಿಂದ ರಕ್ಷಣೆ ನೀಡುವುದಷ್ಟೇ ಅಲ್ಲದೇ ಇನ್ನಿತರ ವೈರಾಣು, ಬ್ಯಾಕ್ಟೀರಿಯ ಸೋಂಕಿನಿಂದಲೂ ರಕ್ಷಣೆ ಒದಗಿಸಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಶೋಧನಾ ಅಭಿವೃದ್ಧಿ ಕೇಂದ್ರವಾಗಿರುವ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ಸ್ (ARCI)ಗಾಗಿ ಅಂತರಾಷ್ಟ್ರೀಯ ಸುಧಾರಿತ ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರು ಮೂಲದ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರ (CSIR-CCMB) ಮತ್ತು ರೆಸಿಲ್ ಕೆಮಿಕಲ್ಸ್ ನ ಸಹಯೋಗದಲ್ಲಿ ಈ ವಿಶೇಷ ಮಾಸ್ಕ್ ನ್ನು ಅಭಿವೃದ್ಧಿಪಡಿಸಲಾಗಿದೆ.
ಈಗಿರುವ, ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿರುವ ಮಾಸ್ಕ್ ಗಳು ವೈರಾಣುಗಳನ್ನು ಮನುಷ್ಯನ ದೇಹವನ್ನು ಪ್ರವೇಶಿಸದಂತೆ ತಡೆಗಟ್ಟುತ್ತವೆಯಷ್ಟೇ ಆದರೆ ವೈರಾಣುವನ್ನು ಕೊಲ್ಲುವ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಮಾಸ್ಕ್ ಗಳನ್ನು ಸರಿಯಾಗಿ ಧರಿಸದೇ ಇದ್ದರೆ ಅಥವಾ ಅವುಗಳನ್ನು ವಿಲೇವಾರಿ ಮಾಡಿದರೆ ಮಾಸ್ಕ್ ಗಳಿಗೆ ಅಂಟಿದ ವೈರಾಣುಗಳು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ವೈರಾಣು ನಿರೋಧಕ ಅಥವಾ ಬ್ಯಾಕ್ಟಿರೀಯಾ ನಿರೋಧಕಗಳು ಇಲ್ಲದ ಸಾಂಪ್ರದಾಯಿಕ ಮಾಸ್ಕ್ ಗಳಿಂದ ಜನಸಂದಣಿ ಹೆಚ್ಚಿರುವ ಆಸ್ಪತ್ರೆ, ವಿಮಾನ ನಿಲ್ದಾಣ, ಸ್ಟೇಷನ್ ಗಳು, ಶಾಪಿಂಗ್ ಮಾಲ್ ಗಳಲ್ಲಿ ವೈರಾಣು ಹರಡುವಿಕೆ ನಿಯಂತ್ರಣ ಕಷ್ಟಸಾಧ್ಯವಾಗಿದೆ.
ಈಗ ವಿಜ್ಞಾನಿಗಳು ಮಾಸ್ಕ್ ಗಳು ಕಾಪರ್ ಆಧಾರಿತ, 20 ನ್ಯಾನೋಮೀಟರ್ ನಷ್ಟು ನ್ಯಾನೋಪಾರ್ಟಿಕಲ್ ಗಳನ್ನು ಫ್ಲೇಮ್ ಸ್ಪ್ರೇ ಪೈರೋಲಿಸಿಸ್ (ಎಫ್ಎಸ್ ಪಿ) ಪ್ರೊಸೆಸಿಂಗ್ ಸಂಸ್ಕರಣಾ ಸೌಲಭ್ಯವನ್ನು ಅಭಿವೃದ್ಧಿಪಡಿಸಿದ್ದು ಸ್ವಯಂ ಸೋಂಕುನಿವಾರಕ ಸಾಮರ್ಥ್ಯವನ್ನು ಹೊಂದಿವೆ.