ಕಾಸರಗೋಡು: ಖಾದಿ ಬಟ್ಟೆ ಪ್ರಚಾರಾರ್ಥ ಪ್ರತಿ ಬುಧವಾರ ಖಾದಿಬಟ್ಟೆ ಧರಿಸಿ ಕಚೇರಿಗೆ ಹಾಜರಾಗಲು ನೀಲೇಶ್ವರ ನಗರಸಭಾ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ತೀರ್ಮಾನಿಸಿದ್ದಾರೆ. ಖಾದಿ ಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ.ಜಯರಾಜನ್ ಅವರು ಮೊದಲಬಾರಿಗೆ ನೀಲೇಶ್ವರ ನಗರಸಭೆಗೆ ಭೇಟಿ ನೀಡಿದ ಸಂದರ್ಭ ನೀಡಲಾದ ಸ್ವಾಗತ ಸಮಾರಂಭದಲ್ಲಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಈ ತೀರ್ಮಾನ ಕೈಗೊಂಡಿದ್ದಾರೆ.
ನಗರಸಭಾ ಅಧ್ಯಕ್ಷೆ ಟಿ.ಪಿ ಶಾಂತ ಅವರ ನೇತೃತ್ವದಲ್ಲಿ ನಗರಸಭಾ ಸದಸ್ಯರು ಪಿ.ಜಯರಾಜ್ ಅವರನ್ನು ಬರಮಾಡಿಕೊಳ್ಳಲಾಯಿತು. ನಗರಸಭಾ ಅಮೆಕ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಗರಸಭಾಧ್ಯಕ್ಷೆ ಟಿ.ಪಿ ಶಾಂತಾ ಅವರಿಗೆ ಪಿ.ಜಯರಾಜನ್ ಅವರು ಖಾದಿ ವಸ್ತ್ರಗಳ ಕಿಟ್ ಹಸ್ತಾಂತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷೆ ಟಿ.ಪಿ ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಿ. ಗೌರಿ, ಪಿ. ಸುಭಾಷ್, ಕೆ.ಪಿ ರವೀಂದ್ರನ್, ಟಿ.ಪಿ ಲತಾ, ನಗರಸಭಾ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪಿ.ಪಿ ಮಹಮ್ಮದ್ ರಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಎ.ಫಿರೋಸ್‍ಖಾನ್ ವಂದಿಸಿದರು.