ಮಾಸ್ಕೋ: ರಷ್ಯಾದ ಸಂಸತ್ತಿನ ಮೇಲ್ಮನೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ದೇಶದ ಹೊರಗೆ ಸೇನೆಯನ್ನು ಬಳಸಲು ಅನುಮತಿ ನೀಡಿದೆ.
ರಷ್ಯಾದ ಒಟ್ಟು 153 ಸೆನೆಟರ್‌ಗಳು ಈ ನಿರ್ಧಾರವನ್ನು ಬೆಂಬಲಿಸಿದರು, ಯಾರೂ ವಿರುದ್ಧವಾಗಿ ಮತ ಚಲಾಯಿಸಲಿಲ್ಲ ಅಥವಾ ತಟಸ್ಥರಾಗಿಲ್ಲ. ಇನ್ನು ಈ ನಿರ್ಧಾರವು ತಕ್ಷಣವೇ ಜಾರಿಗೆ ಬರಲಿದೆ ಎಂದು ಸಂಸದರೊಬ್ಬರು ಹೇಳಿದ್ದಾರೆ.
ಪೂರ್ವ ಉಕ್ರೇನ್ ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಎರಡು ಪ್ರದೇಶಗಳನ್ನು ಸ್ವತಂತ್ರವೆಂದು ವ್ಲಾದಿಮಿರ್ ಪುಟಿನ್ ನಿನ್ನೆ ಅಂಗೀಕರಿಸಿದ್ದರು.
ವಿದೇಶಿ ನೆಲದಲ್ಲಿ ಸೇನೆ ಬಳಕೆಗೆ ಮೇಲ್ಮನೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ವ್ಲಾಡಿಮಿರ್ ಪುಟಿನ್ ಉಕ್ರೇನ್ ಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಈ ಕೂಡಲೇ ಪೂರ್ವ ಉಕ್ರೇನ್ ನಲ್ಲಿರುವ ತನ್ನ ಸೇನೆಯನ್ನು ಹಿಂಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಬಂಡುಕೋರರಿಂದ ಸ್ವತಂತ್ರ ರಾಜ್ಯವೆಂದು ಘೋಷಿಸಲ್ಪಟ್ಟಿರುವ ಉಕ್ರೇನ್‌ನ ಪ್ರದೇಶಗಳಲ್ಲಿ ಕಳೆದ ಕೆಲವು ಗಂಟೆಗಳಲ್ಲಿ ಸಾವಿರಾರು ರಷ್ಯಾದ ಸೈನಿಕರು ತಲುಪಿದ್ದಾರೆ. ಬ್ರಿಟನ್‌ನ ದಿನಪತ್ರಿಕೆ ಡೈಲಿ ಮೇಲ್ ವರದಿಯ ಪ್ರಕಾರ, ಕಳೆದ 12 ಗಂಟೆಗಳಲ್ಲಿ ಐದು ಸಾವಿರ ರಷ್ಯಾದ ಸೈನಿಕರು ಲುಹಾನ್ಸ್ಕ್‌ಗೆ, ಆರು ಸಾವಿರ ಡೊನಿಸ್ಕ್‌ಗೆ ಮತ್ತು ಒಂದೂವರೆ ಸಾವಿರ ಹ್ಲೋವ್ರಿಕ್‌ಗೆ ಆಗಮಿಸಿದ್ದಾರೆ ಎಂದು ಉಕ್ರೇನಿಯನ್ ಮಿಲಿಟರಿ ಗುಪ್ತಚರ ಮೂಲಗಳು ತಿಳಿಸಿವೆ.
ರಷ್ಯಾದ ಸೇನೆಯು ಬಂಡುಕೋರರ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಹೋರಾಟ ತೀವ್ರಗೊಂಡಿತು. ಮಂಗಳವಾರ ಬೆಳಗ್ಗೆ ಉಕ್ರೇನ್ ಭಾಗದಲ್ಲಿ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಉಕ್ರೇನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ.