ನವದೆಹಲಿ: ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕೋವಿಡ್ ನಿರ್ಬಂಧಗಳನ್ನು ಸಡಿಲಿಸುವುದರ ಜೊತೆಗೆ ರಾತ್ರಿಯ ಕರ್ಫ್ಯೂ ರದ್ದುಗೊಳಿಸುವುದನ್ನು ಪರಿಗಣಿಸುವಂತೆ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಮಾರ್ಚ್ ತಿಂಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದಂತೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಕುರಿತು ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ಜಾರಿಗೆ ತರಲು ಸಲಹೆ ನೀಡಿದ್ದಾರೆ.
"ಸ್ಥಳೀಯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ, ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಹಬ್ಬಗಳಿಗೆ ಸಂಬಂಧಿಸಿದ ಕೂಟಗಳು; ರಾತ್ರಿ ಕರ್ಫ್ಯೂ; ಸಾರ್ವಜನಿಕ ಸಾರಿಗೆಯ ಕಾರ್ಯಾಚರಣೆಗಳು; ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಸಿನಿಮಾಗಳಂತಹ ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ಬಂಧ ಸಡಿಲಿಕೆಯನ್ನು ಪರಿಗಣಿಸಬಹುದು. ಸಭಾಂಗಣಗಳು, ಜಿಮ್‌ಗಳು, ಸ್ಪಾಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು; ಶಾಲೆಗಳು, ಕಾಲೇಜುಗಳು, ಕಚೇರಿಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ತೆರೆಯಬಹುದು" ಎಂದು ಕೇಂದ್ರ ಹೇಳಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಮಾರ್ಗಸೂಚಿಗಳಲ್ಲಿ, ಗೃಹ ಕಾರ್ಯದರ್ಶಿಯವರು ಕೋವಿಡ್ ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈ ನೈರ್ಮಲ್ಯ ಮತ್ತು ಮುಚ್ಚಿದ ಸ್ಥಳಗಳಲ್ಲಿ ವೆಂಟಿಲೇಷನ್ ಮುಂದುವರಿಸಬೇಕು ಎಂದು ಒತ್ತಿ ಹೇಳಿದೆ.
ಕೋವಿಡ್-19 ಅನ್ನು ನಿರ್ವಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಪರೀಕ್ಷೆ ಮತ್ತು ಕಣ್ಗಾವಲು, ಕ್ಲಿನಿಕಲ್ ನಿರ್ವಹಣೆ, ಲಸಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಅನುಷ್ಠಾನವನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.