ನವದೆಹಲಿ :ಹಿರಿಯ ನಾಯಕ ಅಶ್ವನಿ ಕುಮಾರ್ ಅವರು ಕಾಂಗ್ರೆಸ್ ತ್ಯಜಿಸಿರುವುದು ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ಅಶ್ವನಿ ಕುಮಾರ್ ಅವರ ನಡೆಯ ಕುರಿತು ಪಕ್ಷ ನಾಯಕತ್ವ ಮೌನ ವಹಿಸಿದ್ದರೂ ಜಿ-23 ಎಂದು ಕರೆಯಲ್ಪಡುವ ಪಕ್ಷದೊಳಗಿನ ಭಿನ್ನಮತೀಯ ನಾಯಕರು ಮಾತ್ರ ಅಶ್ವನಿ ಅವರ ನಡೆ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಪಕ್ಷದ ನಾಯಕರು ಒಬ್ಬರ ಹಿಂದೆ ಒಬ್ಬರು ಹೊರನಡೆಯುತ್ತಿರುವುದು ಗಂಭೀರ ಕಳವಳಕಾರಿ ವಿಚಾರ ಎಂದು ಹಿರಿಯ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.
ಪಕ್ಷವು ಗಂಭೀರವಾಗಿ ಆತ್ಮಾವಲೋಕನ ಮಾಡಬೇಕಾದ ಸಮಯ ಬಂದಿದೆ ಎಂದು ಆಝಾದ್, ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮ ಮತ್ತು ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
"ಮಾಜಿ ಕೇಂದ್ರ ಸಚಿವರುಗಳ ಪೈಕಿ ಪಕ್ಷದಿಂದ ಹೊರನಡೆದ ನಾಲ್ಕನೇ ಅಥವಾ ಐದನೇ ನಾಯಕರಾಗಿದ್ದಾರೆ ಅಶ್ವನಿ. ಅವರ ಹೊರತಾಗಿ ದೇಶಾದ್ಯಂತ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಪಕ್ಷ ತ್ಯಜಿಸಿದ್ದಾರೆ,'' ಎಂದು ಆಝಾದ್ ಹೇಳಿದ್ದಾರೆ.
"ಅವರ ಕುಟುಂಬ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಕಾಂಗ್ರೆಸ್ ಜತೆಗಿದೆ. ಅಂತಹ ಜನರು ಹೊರನಡೆದಿದ್ದಾರೆಂದಾದರೆ, ಏನೋ ತಪ್ಪಾಗಿದೆ ಎಂದು ತಿಳಿಯುತ್ತದೆ,'' ಎಂದು ಅವರು ಹೇಳಿದ್ದಾರೆ.
ಭಿನ್ನಮತೀಯ ನಾಯಕರೆಂದು ಗುರುತಿಸಲ್ಪಟ್ಟಿರುವ ಇನ್ನೊಬ್ಬ ನಾಯಕ ಹಾಗೂ ಹರ್ಯಾಣಾದ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹುಡಾ ಪ್ರತಿಕ್ರಿಯಿಸಿ, "ಅಶ್ವಿನಿ ಕುಮಾರ್ ಅವರೊಬ್ಬ ಹಳೆಯ ಸ್ನೇಹಿತ ಅವರು ಪಕ್ಷ ತೊರೆದಿರುವುದು ದುರಾದೃಷ್ಟಕರ,'' ಎಂದು ಟ್ವೀಟ್ ಮಾಡಿದ್ದಾರೆ.